image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಸ್ಟ್ರೇಲಿಯಾ ಓಪನ್ ಫೈನಲ್ ನಲ್ಲಿ ಜೊಕೊವಿಚ್‌-ಅಲ್ಕರಾಜ್ ಸೆಣಸು

ಆಸ್ಟ್ರೇಲಿಯಾ ಓಪನ್ ಫೈನಲ್ ನಲ್ಲಿ ಜೊಕೊವಿಚ್‌-ಅಲ್ಕರಾಜ್ ಸೆಣಸು

ಮೆಲ್ಬರ್ನ್: ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್ ಅವರಿಗೆ ಐದು ಸೆಟ್‌ಗಳ ಸುದೀರ್ಘ ಪಂದ್ಯದಲ್ಲಿ ಸೋಲುಣಿಸಿದ ನೊವಾಕ್ ಜೊಕೊವಿಚ್‌ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಫೈನಲ್‌ಗೆ ದಾಪುಗಾಲಿಟ್ಟರು. ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿರುವ ಜೊಕೊವಿಚ್‌ ಭಾನುವಾರ ನಡೆಯುವ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ಸರ್ಬಿಯಾದ 38 ವರ್ಷ ವಯಸ್ಸಿನ ಆಟಗಾರ 3-6, 6-3, 4-6, 6-4, 6-4 ರಿಂದ ಇಟಲಿಯ ಎದುರಾಳಿಯನ್ನು ಸೋಲಿಸಿದರು. ಫೈನಲ್‌ನಲ್ಲಿ ಅವರು ತಮಗಿಂತ 16 ವರ್ಷ ಕಿರಿಯ ಆಟಗಾರನ್ನು ಸೋಲಿಸಿದರೆ ಸಾರ್ವಕಾಲಿಕ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಮುಡಿಗೇರಿಸುವ ಅವಕಾಶ ಪಡೆಯಲಿದ್ದಾರೆ. ಆಸ್ಟ್ರೇಲಿಯಾ ಮಾರ್ಗರೇಟ್ ಕೋರ್ಟ್‌ ಅವರೂ 24 ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ದಾಖಲೆ ಹೊಂದಿದ್ದಾರೆ. ವಿಶೇಷವೆಂದರೆ ಶನಿವಾರ ಬೆಳಿಗ್ಗಿನ ಜಾವದವರೆಗೆ ನಡೆದ ಪಂದ್ಯಕ್ಕೆ ಅವರು ಸಾಕ್ಷಿಯಾದರು. ಇನ್ನೊಂದು ಸುದೀರ್ಘ ಸೆಮಿಫೈನಲ್‌ ನಲ್ಲಿ ಸ್ನಾಯುಸೆಳೆತ, ಬಳಲಿಕೆಯನ್ನು ನಿಭಾಯಿಸಿದ ಸ್ಪೇನ್‌ನ ಆಟಗಾರ ಅಲ್ಕರಾಜ್ 6-4, 7-6 (7-5), 6-7 (3-7), 6-7 (4-7), 7-5 ರಿಂದ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಸೋಲಿಸಿದರು. ಸುದೀರ್ಘ 5 ಗಂಟೆ 27 ನಿಮಿಷಗಳ ಹೋರಾಟದಲ್ಲಿ ಯಶಸ್ಸು ಪಡೆದ ಅಲ್ಕರಾಜ್ ಇಲ್ಲಿ ಮೊದಲ ಬಾರಿ ಫೈನಲ್ ತಲುಪಿದರು.

ಇತರ ಮೂರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಚಾಂಪಿಯನ್ ಆಗಿರುವ ಅವರು ಇಲ್ಲಿ ಮೊದಲ ಪ್ರಶಸ್ತಿ ಗೆದ್ದು 'ಕ್ಯಾರೀರ್‌ ಗ್ರ್ಯಾನ್‌ಸ್ಲಾಮ್‌' ಸಾಧಿ ಸಿದ ಅತಿ ಕಿರಿಯ ಆಟಗಾರ ಎನಿಸುವ ಹಾದಿಯಲ್ಲಿದ್ದಾರೆ. ಈ ದಾಖಲೆ ಸ್ಪೇನ್‌ನವರೇ ಆದ ರಫೆಲ್ ನಡಾಲ್ (24ನೇ ವಯಸ್ಸಿನಲ್ಲಿ) ಹೆಸರಿನಲ್ಲಿದೆ. ಜೊಕೊವಿಚ್‌ 2023ರ ಅಮೆರಿಕ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಅಂದಿನಿಂದ ಅಲ್ಕರಾಜ್ ಮತ್ತು ಸಿನ್ನರ್ ಅವರೇ ವಿಶ್ವ ಟೆನಿಸ್‌ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. 2025ರಲ್ಲಿ ಅವರು ನಾಲ್ಕೂ ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಸೆಮಿಫೈನಲ್ ತಲುಪಿದ್ದರು. ಆದರೆ ಶುಕ್ರವಾರ ಆಡಿದ ರೀತಿ ನೋಡಿದರೆ, ಅವರಲ್ಲಿ ಇನ್ನೂ ಸಾಕಷ್ಟು ಆಟ ಉಳಿದಿರುವಂತೆ ಕಂಡಿತು. 4 ಗಂಟೆ 9 ನಿಮಿಷಗಳವರೆಗೆ ನಡೆದ ಈ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ ಅನೇಕ ತಪ್ಪುಗಳನ್ನು ಎಸಗುವ ಮೂಲಕ 24 ವರ್ಷ ವಯಸ್ಸಿನ ಸಿನ್ನರ್ ಎದುರಾಳಿಯ ಸರ್ವ್‌ ಮುರಿಯುವ ಉತ್ತಮ ಅವಕಾಶಗಳನ್ನು ಕೈಚೆಲ್ಲಿದರು. ಇದರೊಂದಿಗೆ ಇಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿಗೆ ಮುತ್ತಿಕ್ಕುವ ಸಿನ್ನರ್‌ ಕನಸು ಭಗ್ನಗೊಂಡಿತು.

Category
ಕರಾವಳಿ ತರಂಗಿಣಿ