ಹೈದರಾಬಾದ್ : ನ್ಯೂಝಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಅಮೋಘ ಜಯ ಸಾಧಿಸಿದೆ. ಅದು ಕೂಡ 208 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ. ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಈ ಪಂದ್ಯದಲ್ಲಿ ಗರಿಷ್ಠ ಸ್ಕೋರ್ಗಳಿಸಿದ್ದ ಸೂರ್ಯಕುಮಾರ್ ಯಾದವ್. ಕೇವಲ 37 ಎಸೆತಗಳನ್ನು ಎದುರಿಸಿದ ಸೂರ್ಯ ಅಜೇಯ 82 ರನ್ ಚಚ್ಚಿದ್ದರು. ಇದಾಗ್ಯೂ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದು ಇಶಾನ್ ಕಿಶನ್ಗೆ ಎಂಬುದು ವಿಶೇಷ. ಇದಕ್ಕೆ ಮುಖ್ಯ ಕಾರಣ ಇಶಾನ್ ಕಿಶನ್ ಆಡಿದ ಇನಿಂಗ್ಸ್. ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ ಆರಂಭಿಸಿದ ಇಶಾನ್ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದರು. ಈ ಸಿಡಿಲಬ್ಬರದೊಂದಿಗೆ ಇಡೀ ಪಂದ್ಯದ ಚಿತ್ರಣವನ್ನು ಸಹ ಬದಲಿಸಿದ್ದರು.
ಅಂದರೆ ಆರಂಭಿಕ ಆಘಾತಕ್ಕೊಳಗಾಗಿದ್ದ ಭಾರತ ತಂಡವನ್ನು ಪಾರು ಮಾಡಿದ್ದು ಇಶಾನ್ ಕಿಶನ್. ಯುವ ಎಡಗೈ ದಾಂಡಿಗನ ಸಿಡಿಲಬ್ಬರದಿಂದಾಗಿ ಉಳಿದ ಬ್ಯಾಟರ್ಗಳ ಒತ್ತಡ ಕೂಡ ಇಳಿಯಿತು. ಇದಾದ ಬಳಿಕವಷ್ಟೇ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿಯೇ ಅಜೇಯ 82 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ಗಿಂತ 76 ರನ್ಗಳಿಸಿದ ಇಶಾನ್ ಕಿಶನ್ ಅವರ ಇನಿಂಗ್ಸ್ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಇನಿಂಗ್ಸ್ ಇಡೀ ಪಂದ್ಯ ಚಿತ್ರಣ ಬದಲಿಸಿದ್ದರಿಂದ ಇಶಾನ್ ಕಿಶನ್ಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗಿದೆ. ವಿಶೇಷ ಎಂದರೆ ಇಶಾನ್ ಕಿಶನ್ ಟೀಮ್ ಇಂಡಿಯಾ ಪರ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆಯುತ್ತಿರುವುದು ಬರೋಬ್ಬರಿ 4 ವರ್ಷಗಳ ಬಳಿಕ. ಅಂದರೆ ಇದಕ್ಕೂ ಮುನ್ನ 2022 ರಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಪಾಕೆಟ್ ಡೈನಾಮೊ ಮತ್ತೆ ಸದ್ದು ಮಾಡಿರುವುದು ವಿಶೇಷ.