ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಇನ್ನಿಂಗ್ಸ್ನಲ್ಲಿ ಎರಡು ದಾಖಲೆಗಳನ್ನು ಬರೆದು ವಿಶ್ವದ ಏಕೈಕ ತಂಡವಾಗಿ ಹೊರ ಹೊಮ್ಮಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿ, ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, 2 ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಅವರ ಬಿರುಸಿನ ಬ್ಯಾಟಿಂಗ್ನಿಂದಾಗಿ ಕೇವಲ 18 ಎಸೆತಗಳಲ್ಲಿ 50 ರನ್ಗಳನ್ನು ಪೂರ್ಣಗೊಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವೇಗವಾಗಿ 50 ರನ್ ಪೂರ್ಣಗೊಳಿಸಿದ ವಿಶ್ವದ ಮೊದಲ ತಂಡವಾಗಿ ದಾಖಲೆ ಬರೆಯಿತು.
ಬಳಿಕ ಟೆಸ್ಟ್ನಲ್ಲಿ ವೇಗವಾಗಿ 100ರನ್ಗಳನ್ನೂ ಪೂರ್ಣಗೊಳಿಸುವ ಮೂಲಕ ಎರಡನೇ ವಿಶ್ವ ದಾಖಲೆಯನ್ನೂ ಬರೆಯಿತು. 10.1 ಓವರ್ನಲ್ಲೇ ಭಾರತ ತಂಡ 100 ರನ್ ಕಲೆ ಹಾಕಿ ಈ ಸಾಧನೆ ಮಾಡಿತು. ಇದರೊಂದಿಗೆ ತನ್ನದೇ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಅಳಿಸಿಹಾಕಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 12.2 ಓವರ್ಗಳಲ್ಲಿ 100 ರನ್ ಪೂರ್ಣಗೊಳಿಸಿ ಅತ್ಯಂತ ವೇಗವಾಗಿ ನೂರು ರನ್ಗಳನ್ನು ಪೂರೈಸಿದ ವಿಶ್ವದ ಏಕೈಕ ತಂಡವಾಗಿತ್ತು. ಇದೀಗ ತನ್ನದೇ ಆದ ದಾಖಲೆಯನ್ನು ಮುರಿದು ಹಾಕಿದೆ ಟೀಂ ಇಂಡಿಯಾ.