ಹೈದರಬಾದ್ : ಅಂಡರ್-19 ವಿಶ್ವಕಪ್ನ 14ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಅಮೋಘ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 329 ರನ್ಗಳ ಅಂತರದಿಂದ ಎಂಬುದು ವಿಶೇಷ. ನಮೀಬಿಯಾದ ಹೈ ಫರ್ಫಾಮೆನ್ಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ತಂಝನಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ತಂಝನಿಯಾ ತಂಡದ ನಾಯಕ ಲಕ್ಷ್ ಬಕ್ರಾನಿಯಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಜೋರಿಚ್ ವ್ಯಾನ್ (47) ಹಾಗೂ ಅದ್ನಾನ್ (32) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮುಹಮ್ಮದ್ ಬುಲ್ಬುಲಿಯಾ 108 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 108 ರನ್ ಬಾರಿಸಿದರು. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೇಸನ್ ರೌಲ್ಸ್ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳನ್ನು ಒಳಗೊಂಡಂತೆ 101 ಎಸೆತಗಳಲ್ಲಿ 125 ರನ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಪೌಲ್ ಜೇಮ್ಸ್ 18 ಎಸೆತಗಳಲ್ಲಿ 46 ರನ್ ಚಚ್ಚಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 397 ರನ್ ಕಲೆಹಾಕಿತು.