ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೂ ಮುಂಚಿತವಾಗಿ ನಡೆಯಲಿರುವ ಆಟಗಾರರ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಫ್ರಾಂಚೈಸಿಗಳು ತಂಡಗಳಲ್ಲಿ ತಲಾ ಎಷ್ಟು ಆಟಗಾರರನ್ನು ರಿಟೇನ್ ಮಾಡಿಕೊಳ್ಳಬಹುದು ಎಂಬುದರ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ನಿಯಮ ತಂದಿದೆ. ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
18ನೇ ಆವೃತ್ತಿಯ ಹರಾಜಿಗೂ ಮೊದಲು ಫ್ರಾಂಚೈಸಿಗಳು ತಲಾ ಗರಿಷ್ಠ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು. ಐವರು ಆಟಗಾರರನ್ನು ರಿಟೇನ್ ಮಾಡಿಕೊಂಡರೆ ಮತ್ತೊಬ್ಬ ಆಟಗಾರನನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಉಳಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಆರ್‌ಟಿಎಂ (ರೈಟ್ ಟು ಮ್ಯಾಚ್) ಕಾರ್ಡ್ ಬಳಸಿಕೊಳ್ಳುವ ಆಯ್ಕೆಯೂ ಇದೆ.
ರೈಟ್ ಟು ಮ್ಯಾಪ್ ಕಾರ್ಡ್ ಅಥವಾ ಆರ್‌ಟಿಎಂ ಇದನ್ನು 2018ರಲ್ಲಿ ಜಾರಿಗೆ ತರಲಾಯಿತು. ಇದರಡಿಯಲ್ಲಿ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರನನ್ನು ರಿಟೇನ್ ಮಾಡಿಕೊಳ್ಳದೇ ಆರ್‌ಟಿಎಂ ಪಟ್ಟಿಯಲ್ಲಿ ಸೇರಿಸಿದ್ದರೆ, ಆ ಆಟಗಾರ ಹರಾಜಿಗೆ ಬರುತ್ತಾನೆ. ನಂತರ ತಂಡ ಆತನನ್ನು ಮರಳಿ ಪಡೆಯಬೇಕೆಂದು ಬಯಸಿದರೆ ಅಂತಿಮವಾಗಿ ಆ ಆಟಗಾರನ ಮೇಲೆ ಯಾವ ತಂಡ ಎಷ್ಟು ಹಣ ಬಿಡ್ ಮಾಡಿರುತ್ತದೋ ಅದೇ ಮೊತ್ತಕ್ಕೆ ಮರಳಿ ಖರೀದಿಸಬಹುದು.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಲೇಯಿಂಗ್ 11ನಲ್ಲಿರುವ ಆಟಗಾರರು ಪಂದ್ಯ ಶುಲ್ಕ ಪಡೆಯಲಿದ್ದಾರೆ. ಪ್ರತಿ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್ ಒಳಗೊಂಡಂತೆ) ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ವೇತನ ನಿಗದಿ ಮಾಡಲಾಗಿದೆ. ಅಂದರೆ ಹರಾಜಿನಲ್ಲಿ ಪಡೆದ ಹಣ ಹೊರತುಪಡಿಸಿ 14 ಪಂದ್ಯಗಳಿಂದ ಆಟಗಾರರು 1.5 ಕೋಟಿ ರೂ.ಯನ್ನು ಹೆಚ್ಚುವರಿಯಾಗಿ ಪಡೆಯುವರು.