ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ನಾವು ಭಾರತಕ್ಕೆ ಬರಲ್ಲ ಎಂದಿದ್ದ ಬಾಂಗ್ಲಾದೇಶ ತಂಡಕ್ಕೆ ಐಸಿಸಿ ಬಿಸಿ ಮುಟ್ಟಿಸಿದೆ. 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಂಬರುವ ಫೆಬ್ರವರಿ 07ರಿಂದ ಆರಂಭವಾಗಲಿದ್ದು, ಟೂರ್ನಿಗೆ ಭಾರತ ಹಾಗೂ ಶ್ರೀಲಂಕ ಜಂಟಿ ಆತಿಥ್ಯ ವಹಿಸಿವೆ. ಮುಸ್ತಾಫಿಜುರ್ ರಹಮಾನ್‌ರನ್ನು ಐಪಿಎಲ್‌ನಿಂದ ಹೊರಹಾಕಿದ ಬಿಸಿಸಿಐ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಾಂಗ್ಲಾದೇಶ, ತಾನು ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ. ಬದಲಿಗೆ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವಂತೆ ಐಸಿಸಿಗೆ ಒತ್ತಾಯಿಸಿತ್ತು.ಎರಡೂ ಕ್ರಿಕೆಟ್ ಮಂಡಳಿಗಳ ನಡುವಿನ ತಿಕ್ಕಾಟ ನಿಲ್ಲಿಸಲು ಐಸಿಸಿ ಮಧ್ಯಪ್ರವೇಶ ಮಾಡಿದ್ದು, ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ವರದಿಯಾಗಿತ್ತು.
ಬಾಂಗ್ಲಾ ಜೊತೆ ಮಾತುಕತೆ ನಡೆಸಿರುವ ಐಸಿಸಿ, ಭಾರತಕ್ಕೆ ಪ್ರಯಾಣಿಸದೆ ಇರಲು ಕೈಗೊಂಡಿರುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಿತ್ತು. ಅದಕ್ಕೆ ಬಿಸಿಬಿ ತನ್ನ ಸರ್ಕಾರವನ್ನು ಕೇಳಿ ತಿಳಿಸುವುದಾಗಿ ಹೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮುಂದಿನ ತಿಂಗಳ ಟಿ20 ವಿಶ್ವಕಪ್‌ನಲ್ಲಿ ತಾನು ಭಾರತದಲ್ಲಿ ಆಡುವುದಿಲ್ಲ ಎಂದಿದ್ದ ಬಾಂಗ್ಲಾದೇಶ, ಇದೀಗ ತನ್ನ ನಿರ್ಧಾರವನ್ನು ಮರುಪರಿಶೀಲಿಸಲು ನಿರ್ಧರಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಳಿ ಸಮಯಾವಕಾಶ ಕೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೀಗ ಭಾರತದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಸ್ಥಳಾಂತರ ಮಾಡಲು ಬಾಂಗ್ಲಾದೇಶ ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಡಿ ಇಲ್ಲದಿದ್ದರೇ ಟೂರ್ನಿಯಿಂದಲೇ ಹೊರಹೋಗಿ ಎನ್ನುವ ಖಡಕ್ ಎಚ್ಚರಿಕೆಯನ್ನು ಬಾಂಗ್ಲಾದೇಶಕ್ಕೆ ಐಸಿಸಿ ರವಾನಿಸಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ಆಡುವ ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಭಾರತದಲ್ಲೇ ನಿಗದಿಯಾಗಿದ್ದು, ಮೊದಲ ನಾಲ್ಕು ಪಂದ್ಯಗಳಿಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಿದ್ದರೇ, ಕೊನೆಯ ಲೀಗ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ.