image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದ ಬಾಂಗ್ಲಾದೇಶ ಸರ್ಕಾರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದ ಬಾಂಗ್ಲಾದೇಶ ಸರ್ಕಾರ

ಡಾಕಾ: ಬಾಂಗ್ಲಾದೇಶ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಐಪಿಎಲ್‌ನಿಂದ ಬಾಂಗ್ಲಾ ವೇಗದ ಬೌಲರ್ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬಾಂಗ್ಲಾದೇಶದ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್, ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸುವ ಸೂಚನೆ ನೀಡಿದ್ದರು. "ಬಾಂಗ್ಲಾದೇಶ ಆಟಗಾರನಿಗೆ ನಡೆದ ಅವಮಾನಕ್ಕೆ ಪ್ರತೀಕಾರವಾಗಿ ನಮ್ಮ ದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ" ಎಂದು ಅವರು ಬಹಿರಂಗವಾಗಿ ಹೇಳಿದ್ದರು. ಇನ್ನೂ, "ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ, ಬಾಂಗ್ಲಾ ಕ್ರಿಕೆಟ್ ಅಥವಾ ನಮ್ಮ ಕ್ರಿಕೆಟಿಗರ ಅವಮಾನವನ್ನು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ" ಎಂದು ಆಸಿಫ್ ನಜ್ರುಲ್ ತೀವ್ರ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ಬೆನ್ನಲ್ಲೇ ಇದೀಗ ಬಾಂಗ್ಲಾದೇಶದಲ್ಲಿ ಐಪಿಎಲ್ ಲೈವ್ ಪ್ರಸಾರಕ್ಕೆ ಅಧಿಕೃತವಾಗಿ ಬ್ರೇಕ್ ಹಾಕಲಾಗಿದೆ. ಈಗಾಗಲೇ ಪಾಕಿಸ್ತಾನ ಸರ್ಕಾರವೂ ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿರುವುದನ್ನು ಇಲ್ಲಿ ಗಮನಿಸಬೇಕಿದೆ. ಇದೀಗ ಬಾಂಗ್ಲಾದೇಶವೂ ಪಾಕ್ ಮಾದರಿಯಲ್ಲೇ ಐಪಿಎಲ್ ಲೈವ್ ಟೆಲಿಕಾಸ್ಟ್‌ಗೆ ತಡೆ ನೀಡಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB), ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಗೆ ಮನವಿ ಸಲ್ಲಿಸಿದೆ. ಐಪಿಎಲ್‌ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, "ಬಾಂಗ್ಲಾ ತಂಡದ ಪಂದ್ಯಗಳಿಗೆ ಪರ್ಯಾಯ ಸ್ಥಳವಾಗಿ ಶ್ರೀಲಂಕಾವನ್ನು ಪ್ರಸ್ತಾಪಿಸುವಂತೆ ಮಧ್ಯಂತರ ಸರ್ಕಾರವು ಬಿಸಿಬಿಗೆ ನಿರ್ದೇಶನ ನೀಡಿದೆ" ಎಂದು ತಿಳಿಸಿದ್ದಾರೆ. "ಬಾಂಗ್ಲಾದೇಶ ಕ್ರಿಕೆಟಿಗನೊಬ್ಬನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಇಡೀ ಬಾಂಗ್ಲಾ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ" ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ. ಐಪಿಎಲ್ ವಿವಾದ ಇದೀಗ ಕ್ರೀಡಾ ಕ್ಷೇತ್ರವನ್ನು ಮೀರಿ ರಾಜಕೀಯ ಮತ್ತು ರಾಜತಾಂತ್ರಿಕ ಚರ್ಚೆಗಳಿಗೂ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

Category
ಕರಾವಳಿ ತರಂಗಿಣಿ