image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎರಡೇ ದಿನದಲ್ಲಿ ಮುಗಿದ ಬಾಕ್ಸಿಂಗ್ ಡೇ ಟೆಸ್ಟ್! ಆಸ್ಟ್ರೇಲಿಯಾ ನೆಲದಲ್ಲಿ 14 ವರ್ಷಗಳ ಗೆಲುವಿನ ಕನಸನ್ನು ನನಸಾಗಿಸಿಕೊಂಡ ಇಂಗ್ಲೆಂಡ್

ಎರಡೇ ದಿನದಲ್ಲಿ ಮುಗಿದ ಬಾಕ್ಸಿಂಗ್ ಡೇ ಟೆಸ್ಟ್! ಆಸ್ಟ್ರೇಲಿಯಾ ನೆಲದಲ್ಲಿ 14 ವರ್ಷಗಳ ಗೆಲುವಿನ ಕನಸನ್ನು ನನಸಾಗಿಸಿಕೊಂಡ ಇಂಗ್ಲೆಂಡ್

ಹೈದರಬಾದ್ : ಇಗ್ಲೆಂಡ್ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಮಣ್ಣಿನಲ್ಲಿ 14 ವರ್ಷಗಳ ನಂತರ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (MSG) ನಡೆದ ಆಯಷಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಈ ಬಾಕ್ಸಿಂಗ್ ಡೇ ಟೆಸ್ಟ್ ಕೇವಲ ಎರಡು ದಿನಗಳಲ್ಲಿ ಮುಗಿದಿದ್ದು, ಒಟ್ಟು 36 ವಿಕೆಟ್‌ಗಳು ಬಿದ್ದಿವೆ. ಸತತ 3 ಟೆಸ್ಟ್ ಸೋತು ಸರಣಿ ಕಳೆದುಕೊಂಡಿರುವ ಇಂಗ್ಲೆಂಡ್ ತಂಡಕ್ಕೆ ಈ ಗೆಲುವು ಸಮಾಧಾನ ತಂದಿದೆ. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಹೀನಾಯವಾಗಿ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆಮಾಡಿತು. ಮೆಲ್ಬೋರ್ನ್ ಪಿಚ್ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿತ್ತು. ಇಂಗ್ಲೆಂಡ್ ವೇಗದ ಬೌಲರ್ ಜೋಶ್ ಟಂಗ್ 5 ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡವನ್ನ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟ್ ಮಾಡಿದರು. ಆದರೆ ತಿರುಗೇಟು ಕೊಟ್ಟ ಆಸ್ಟ್ರೇಲಿಯಾ ಬೌಲರ್‌ಗಳು ಇಂಗ್ಲೆಂಡ್ ತಂಡವನ್ನು 110 ರನ್‌ಗಳಿಗೆ ಆಲೌಟ್ ಮಾಡಿ 42 ರನ್‌ಗಳ ಮುನ್ನಡೆ ತಂದುಕೊಟ್ಟರು. ಮೈಕಲ್ ನೇಸರ್ 4 ವಿಕೆಟ್ ಮತ್ತು ಸ್ಕಾಟ್ ಬೋಲ್ಯಾಂಡ್ 3 ವಿಕೆಟ್ ಪಡೆದು ಮಿಂಚಿದರು.

ಎರಡನೇ ದಿನದಲ್ಲಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಆರಂಭಿಸಿತು. ತವರು ತಂಡ 46 ರನ್ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿದರೂ, ಟ್ರಾವಿಸ್ ಹೆಡ್ (46 ರನ್) ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಬ್ರೈಡನ್ ಕಾರ್ಸ್ ಹೆಡ್ ಅವರನ್ನು ಔಟ್ ಮಾಡಿ ಆಸ್ಟ್ರೇಲಿಯಾ ಕುಸಿತಕ್ಕೆ ಕಾರಣರಾದರು. ಆಸ್ಟ್ರೇಲಿಯಾ ತನ್ನ 2ನೇ ಇನ್ನಿಂಗ್ಸ್​​ನಲ್ಲಿ 132 ರನ್‌ಗಳಿಗೆ ಆಲೌಟ್ ಆದರು. ಹೆಡ್ ಹೊರೆತುಪಡಿಸಿದರೆ ಸ್ಟೀವ್ ಸ್ಮಿತ್ 24 ರನ್ ಅಜೇಯರಾಗಿ ಉಳಿದು 2ನೇ ಗರಿಷ್ಠ ಸ್ಕೊರರ್ ಆದರು. ಗ್ರೀನ್ (19) ಎರಡಂಕಿ ದಾಟಿದ ಮತ್ತೊಬ್ಬ ಆಟಗಾರರಾದರು. ಉಳಿದವರೆಲ್ಲಾ ಒಂದಂಕಿ ಮೊತ್ತಕ್ಕೆ ಔಟ್ ಆದರು. ಆಸ್ಟ್ರೇಲಿಯಾ ತಂಡ ಒಟ್ಟಾರೆ 132ಕ್ಕೆ ಆಲೌಟ್ ಆಗಿ 179 ರನ್​ಗಳ ಗುರಿ ನೀಡಿತ್ತು. ಇಂಗ್ಲೆಂಡ್ ಚೇಸಿಂಗ್‌ನಲ್ಲಿ ತಮ್ಮ 'ಬಾಜ್‌ಬಾಲ್' ತಂತ್ರವನ್ನು ಬಳಸಿತು. ಓಪನರ್‌ಗಳಾದ ಬೆನ್ ಡಕೆಟ್ (34 ರನ್, 26 ಎಸೆತಗಳು) ಮತ್ತು ಜಾಕ್ ಕ್ರಾಲೆ (37 ರನ್, 48 ಎಸೆತ) ಆಕ್ರಮಣಕಾರಿ ಆಟ ಆಡಿದರು. ಡಕೆಟ್ ಮಿಚೆಲ್ ಸ್ಟಾರ್ಕ್ ಯಾರ್ಕರ್‌ಗೆ ಔಟಾದರು. ನಂತರ ಬಡ್ತಿ ಪಡೆದು ಬಂದ ಬ್ರೈಡೆನ್ ಕಾರ್ಸ್ 9ಕ್ಕೆ ಔಟ್ ಆದರೆ, ಜೇಕಬ್ ಬೆಥೆಲ್ 46 ಎಸೆತಗಳಲ್ಲಿ 40 ರನ್​ಗಳಿಸಿ ಸ್ಕೋರ್ ಹೆಚ್ಚಿಸಿ ಔಟ್ ಆದರು. ಅನುಭವಿಗಳಾದ ಜೋ ರೂಟ್ (15 ರನ್) ಮತ್ತು ಬೆನ್ ಸ್ಟೋಕ್ಸ್ (2 ರನ್) 2ನೇ ಇನ್ನಿಂಗ್ಸ್​​ನಲ್ಲೂ ಕೈಕೊಟ್ಟರು. ಆದರೆ ಹ್ಯಾರಿ ಬ್ರೂಕ್ (18* ಅಜೇಯ) ಇಂಗ್ಲೆಂಡ್ ಅನ್ನು ಗೆಲುವಿನ ಗಡಿ ದಾಟಿಸಿದರು. ಒಟ್ಟಾರೆ ಇಂಗ್ಲೆಂಡ್ ಇಂಗ್ಲೆಂಡ್ 32.2 ಓವರ್‌ಗಳಲ್ಲಿ 6 ವಿಕೆಟ್ ಕಳೆದು ಗುರಿ ತಲುಪಿತು.

ಈ ಪಂದ್ಯದಲ್ಲಿ ಒಬ್ಬ ಸ್ಪಿನ್ನರ್ ಕೂಡ ಬೌಲ್ ಮಾಡಲಿಲ್ಲ, ಎಲ್ಲಾ ವಿಕೆಟ್‌ಗಳನ್ನು ವೇಗದ ಬೌಲರ್‌ಗಳು ಪಡೆದರು. ಪಿಚ್ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿತ್ತು, ಆದರೆ ಇದು ವಿವಾದಕ್ಕೆ ಕಾರಣವಾಯಿತು. ಏಕೆಂದರೆ ಆಯಷಸ್​ನಂತರ ಪ್ರಸಿದ್ಧ ಸರಣಿಯ ಪಂದ್ಯ ಕೇವಲ ಎರಡು ದಿನಗಳಲ್ಲಿ ಮುಗಿದಿರುವುದು ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಇನ್ನು ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಅವರ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ಮಣ್ಣಿನಲ್ಲಿ ಮೊದಲ ಟೆಸ್ಟ್ ಗೆಲುವು ಎಂಬುದು ಗಮನಾರ್ಹ. ಇಂಗ್ಲೆಂಡ್ ಕೊನೆಯದಾಗಿ 2010-11ರಲ್ಲಿ ಆಂಡ್ರ್ಯೂ ಸ್ಟ್ರಾಸ್ ನೇತೃತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ಗೆಲುವು ಪಡೆದಿತ್ತು. ಈ ಗೆಲುವು ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್​​ರ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಆಸ್ಟ್ರೇಲಿಯಾ ತಂಡ ಹಿಂದೆಂದಿಗಿಂತ ದುರ್ಬಲವಾಗಿದೆ ಎನ್ನುವ ಮಾತಿದ್ದರೂ ಇಂಗ್ಲೆಂಡ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಟೀಕೆಗೆ ತುತ್ತಾಗಿತ್ತು. ಈ ಗೆಲುವು ಸಮಾಧಾನ ತಂದಿದೆ. ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 4ರಿಂದ ಆರಂಭವಾಗಲಿದೆ.

Category
ಕರಾವಳಿ ತರಂಗಿಣಿ