image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಲ್ಕನೇ ಆವೃತ್ತಿಯ ವಿಶ್ವ ಟೆನಿಸ್‌ ಲೀಗ್ ಚಾಂಪಿಯನ್ ಪಟ್ಟಕ್ಕೇರಿದ ಕೇಟ್ಸ್ ತಂಡ

ನಾಲ್ಕನೇ ಆವೃತ್ತಿಯ ವಿಶ್ವ ಟೆನಿಸ್‌ ಲೀಗ್ ಚಾಂಪಿಯನ್ ಪಟ್ಟಕ್ಕೇರಿದ ಕೇಟ್ಸ್ ತಂಡ

ಬೆಂಗಳೂರು: ಶನಿವಾರ ಸಂಜೆಯ ಚಳಿಯ ವಾತಾವರಣದಲ್ಲಿ ಸೇರಿದ್ದ ಸುಮಾರು ಮೂರು ಸಾವಿರದಷ್ಟು ಪ್ರೇಕ್ಷಕರಿಗೆ, ತಾರಾ ವರ್ಚಸ್ಸಿನ ಆಟಗಾರರಿದ್ದ ವಿಶ್ವ ಟೆನಿಸ್‌ ಲೀಗ್‌ ಫೈನಲ್ ಪಂದ್ಯ ನಿರಾಸೆ ಮೂಡಿಸಲಿಲ್ಲ. ಕೈಟ್ಸ್‌ ತಂಡ ಹೊನಲು ಬೆಳಕಿನಡಿ ನಡೆದ ತೀವ್ರ ಹೋರಾಟದ ಪಂದ್ಯದಲ್ಲಿ 22-19 ರಿಂದ ಈಗಲ್ಸ್ ತಂಡವನ್ನು ಸೋಲಿಸಿ ನಾಲ್ಕನೇ ಆವೃತ್ತಿಯ ವಿಶ್ವ ಟೆನಿಸ್‌ ಲೀಗ್ ಚಾಂಪಿಯನ್ ಪಟ್ಟಕ್ಕೇರಿತು. ಕಬ್ಬನ್‌ ಪಾರ್ಕ್‌ನ ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣದಲ್ಲಿ ಮೊದಲ ಮೂರು ಪಂದ್ಯಗಳ ನಂತರವೂ ಎರಡೂ ತಂಡಗಳ ಅಂಕಗಳ ನಡುವೆ ಹೆಚ್ಚೇನೂ ಅಂತರ ಇರಲಿಲ್ಲ. ಮೊದಲ ಸಿಂಗಲ್ಸ್‌ನಲ್ಲಿ ಕೈಟ್ಸ್‌ ತಂಡದ ಪರ ಉಕ್ರೇನ್‌ನ ಮಾರ್ತಾ ಕೊಸ್ಟಿಯುಕ್‌ 6 -4 ರಿಂದ ಭರವಸೆಯ ಆಟಗಾರ್ತಿ ಈಗಲ್ಸ್‌ನ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಅವರನ್ನು ಸೋಲಿಸಿದರು. ಶ್ರೀವಲ್ಲಿ 7ನೇ ಗೇಮ್‌ನಲ್ಲಿ ಕೆಲವು ಉತ್ತಮ ಫೋರ್‌ಹ್ಯಾಂಡ್‌ ರಿಟರ್ನ್‌ಗಳ ಮೂಲಕ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದರು. ಆದರೆ ಎಂಟನೇ ಗೇಮ್‌ನಲ್ಲಿ ಮಾರ್ತಾ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ್ದರಿಂದ ಸ್ಕೋರ್ 4-4 ಸಮನಾಯಿತು. ನಂತರ ಹತ್ತನೇ ಗೇಮ್‌ನಲ್ಲಿ ಮಾರ್ತಾ ನಿರ್ಣಾಯಕ ಬ್ರೇಕ್ ಪಡೆದರು. ಶ್ರೀವಲ್ಲಿ ಒಂದು ಡಬಲ್‌ ಫಾಲ್ಟ್‌ ಎಸಗಿದರು. ನಂತರ ಒಂದು 'ಲಾಬ್‌' ಅನ್ನು ಬಿರುಸಾಗಿ ಹೊಡೆಯುವ ಅವಕಾಶದಲ್ಲಿ ಶ್ರೀವಲ್ಲಿ ಎಡವಿದರು. ನಂತರ ಬಿರುಸಿನ ಸರ್ವ್‌ ರಿಟರ್ನ್ ಹೊಡೆತದ ಮೂಲಕ ಉಕ್ರೇನ್‌ನ ಆಟಗಾರ್ತಿ ಗೇಮ್‌ ಹಾಗೂ ಪಂದ್ಯ ತಮ್ಮದಾಗಿಸಿಕೊಂಡರು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಈಗಲ್ಸ್‌ ತಂಡದ ಗೇಲ್‌ ಮಾನ್ಫಿಲ್ಸ್‌- ಶ್ರೀವಲ್ಲಿ 6-4, 6-3 ರಿಂದ ಮಾರ್ತಾ- ದಕ್ಷಿಣೇಶ್ವರ್‌ ಸುರೇಶ್‌ ಜೋಡಿಯನ್ನು ಸೋಲಿಸಿತು. ಈ ಪಂದ್ಯದಲ್ಲಿ ಮಾನ್ಫಿಲ್ಸ್‌ ಮತ್ತು ಸುರೇಶ್ ಅವರ ಭರ್ಜರಿ ಸರ್ವ್‌ಗಳು ಗಮನ ಸೆಳೆದವು.

ಪುರುಷರ ಡಬಲ್ಸ್‌ನಲ್ಲಿ ಕೈಟ್ಸ್‌ನ ದಕ್ಷಿಣೇಶ್ವರ ಸುರೇಶ್ ಜೊತೆಗೂಡಿದ ಆಸ್ಟ್ರೇಲಿಯಾದ ತಾರೆ ನಿಕ್ ಕಿರ್ಗಿಯೋಸ್‌ 6-3 ರಿಂದ ಸುಮಿತ್ ನಗಾಲ್‌ ಮತ್ತು ಗೇಲ್‌ ಮಾನ್ಫಿಲ್ಸ್ ಜೋಡಿಯನ್ನು ಸೋಲಿಸಿ ಕೈಟ್ಸ್ ತಂಡಕ್ಕೆ ಅಲ್ಪ ಮುನ್ನಡೆ ಒದಗಿಸಿದರು. ನಿರ್ಣಾಯಕವಾಗಿದ್ದ ಕೊನೆಯ (ಪುರುಷರ ಸಿಂಗಲ್ಸ್‌) ಪಂದ್ಯದಲ್ಲಿ ದಕ್ಷಿಣೇಶ್ವರ್‌ ಸುರೇಶ್ 7-6 (7-4) ರಿಂದ ಸುಮಿತ್ ನಾಗಲ್ ಅವರನ್ನು ಸೋಲಿಸಿ ಕೈಟ್ಸ್‌ ತಂಡಕ್ಕೆ ಮೂರು ಅಂಕಗಳಿಂದ ಗೆಲುವು ಪಡೆಯಲು ನೆರವಾದರು. ಭಾರತ ಕ್ರಿಕೆಟ್‌ ತಂಡದ ತಾರೆ ಕೆ.ಎಲ್‌.ರಾಹುಲ್ ಅವರು ಪಂದ್ಯಕ್ಕೆ ಚಾಲನೆ ನೀಡಿದರು. ಟೆನಿಸ್‌ ಬಾಲ್‌ಗಳನ್ನು ರ್‍ಯಾಕೆಟ್‌ನಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೆ ಆಡಿ ರಂಜಿಸಿದರು.

Category
ಕರಾವಳಿ ತರಂಗಿಣಿ