image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೋಚ್ಚಲ ಟಿ20 ವಿಶ್ವಕಪ್‌ ಗೆದ್ದ ಭಾರತ ಅಂಧರ ಮಹಿಳಾ ತಂಡಕ್ಕೆ ಅದ್ದೂರಿ ಸ್ವಾಗತ

ಚೋಚ್ಚಲ ಟಿ20 ವಿಶ್ವಕಪ್‌ ಗೆದ್ದ ಭಾರತ ಅಂಧರ ಮಹಿಳಾ ತಂಡಕ್ಕೆ ಅದ್ದೂರಿ ಸ್ವಾಗತ

ಬೆಂಗಳೂರು: ಶ್ರಿಲಂಕಾದ ಕೊಲಂಬೊದಲ್ಲಿ ನಡೆದ ಚೊಚ್ಚಲ ಎಸ್‌ಬಿಐ ಮಹಿಳಾ ಅಂಧರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ನಲ್ಲಿ ನೇಪಾಳ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ತಾಯ್ನಾಡಿಗೆ ಆಗಮಿಸಿತು. ಬೆಂಗಳೂರಿಗೆ ಆಗಮಿಸಿದ ತಂಡವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಚೆನ್ನೈ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ, ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ (ಸಿಎಬಿಐ) ಅಧ್ಯಕ್ಷ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ ಅವರ ನೇತೃತ್ವದ ವನಿತಾ ತಂಡವನ್ನು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಂಡ ಪಾಲ್ಗೊಂಡಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಮಹಾಂತೇಶ್, ತಂಡದ ಸಾಧನೆಯನ್ನು ಮೆಚ್ಚಿ ದೆಹಲಿ ಎನ್‌ಸಿಆರ್ ಮೂಲದ ಚಿಂಟೆಲ್ಸ್ ಗ್ರೂಪ್ ಸಂಸ್ಥೆ ಪ್ರತೀ ಆಟಗಾರ್ತಿಯರಿಗೆ ತಲಾ 1 ಲಕ್ಷ ರೂ. ಮತ್ತು ಲಂಡನ್ ಮೂಲದ ಟೆಕ್ ಕಂಪನಿ ಚಿಪ್‌ಲಾಜಿಕ್ ತಲಾ 25,000 ರೂ. ನಗದು ಪುರಸ್ಕಾರ ಘೋಷಿಸಿದ್ದಾಗಿ ತಿಳಿಸಿದರು. ಅಲ್ಲದೆ, ಇಡೀ ತಂಡದ ಆಟಗಾರ್ತಿಯರು ಕಡು ಬಡತನದಲ್ಲಿರುವುದರಿಂದ ಸರ್ಕಾರದ ಜೊತೆಗೆ ಇನ್ನಷ್ಟು ಸಂಸ್ಥೆಗಳು ನೆರವಿನ ಹಸ್ತ ಚಾಚಿದರೆ ಆಟಗಾರ್ತಿಯರಿಗೆ ಇನ್ನಷ್ಟು ಸ್ಫೂರ್ತಿ ಲಭಿಸುತ್ತದೆ ಎಂದರು. ಚಾಂಪಿಯನ್ಸ್‌ ತಂಡವನ್ನು ಮುನ್ನಡೆಸಿದ್ದ ನಾಯಕಿ, ಕನ್ನಡತಿ ದೀಪಿಕಾ ಟಿ.ಸಿ. ಬದುಕಿನ ಕತೆಗಳನ್ನು ಬಿಚ್ಚಿಟ್ಟರು. ತುಮಕೂರಿನ ಶಿರಾದ ಬಡ ಕೃಷಿಕ ಕುಟುಂಬದ ದೀಪಿಕಾ ಮಾತನಾಡಿ, ತಾನು 5 ವರ್ಷದ ಮಗುವಿದ್ದಾಗ ಕಣ್ಣಿಗೆ ಪರಚಿಕೊಂಡು ಒಂದು ಕಣ್ಣಿನ ದೃಷ್ಟಿ ಹೋಯಿತು. ಒಂದು ಹೊತ್ತಿನ ತುತ್ತಿಗೂ ಪರದಾಡುವ ಪರಿಸ್ಥಿಯಲ್ಲಿದ್ದ ನನ್ನ ಕುಟುಂಬಕ್ಕೆ ಚಿಕಿತ್ಸೆ ಕೊಡಿಸಲಾಗಲಿಲ್ಲ. ಬೆಳೆಯುತ್ತಿದ್ದಾಗ ಶಾಲೆಯಲ್ಲಿ (1 4ನೇ ತರಗತಿ) ನಾನು ಹೀಯಾಳಿಕೆಗಳನ್ನು ಕೇಳಿ ನೊಂದಿದ್ದೇನೆ. ಬಳಿಕ ಬ್ಲೈಂಡ್‌ ಕ್ರಿಕೆಟ್‌ಗೆ ಬಂದ ಬಳಿಕ ಪರಿಸ್ಥಿತಿ ಚೂರು ಸುಧಾರಿಸಿದೆ. ನನ್ನದೇ ರೀತಿಯ ಕಡು ಬಡತನ ಇಡೀ ತಂಡದ ಆಟಗಾರ್ತಿಯರಿಗಿದೆ. ಸರ್ಕಾರ, ಸಂಸ್ಥೆಗಳು ನಮ್ಮ ನೆರವಿಗೆ ನಿಂತರೆ ನಮಗೆ ಧೈರ್ಯ ಸಿಗುತ್ತದೆ ಎಂದರು.

Category
ಕರಾವಳಿ ತರಂಗಿಣಿ