ಲಾಸ್ ಏಂಜಲೀಸ್ : 2028 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ವೇಳಾಪಟ್ಟಿಯನ್ನು ಈಗಾಗಲೇ ಘೋಷಿಸಲಾಗಿದೆ. ಆ ಪ್ರಕಾರ ಈ ಕ್ರೀಡಾಕೂಟ ಜುಲೈ 14, 2028 ರಿಂದ ಪ್ರಾರಂಭವಾಗಲಿದ್ದು, ಜುಲೈ 30 ರವರೆಗೆ ನಡೆಯಲಿದೆ. ಇದುವರೆಗೆ ನಡೆದ ಒಲಿಂಪಿಕ್ ಕ್ರೀಡಾಕೂಟಕ್ಕೆ ಹೋಲಿಸಿದರೆ ಇದು ಅತಿದೊಡ್ಡ ಸ್ಪರ್ಧೆಯಾಗಿದೆ. ಲಾಸ್ ಏಂಜಲೀಸ್ ಮತ್ತು ಒಕ್ಲಹೋಮ ನಗರದಲ್ಲಿ 49 ಸ್ಥಳಗಳು ಮತ್ತು 18 ವಲಯಗಳನ್ನು ಈ ಪಂದ್ಯಾವಳಿಗಾಗಿ ನಿರ್ಧರಿಸಲಾಗಿದೆ. ಏಕೆಂದರೆ ಈ ಪಂದ್ಯಾವಳಿಯಲ್ಲಿ 36 ವಿವಿಧ ರೀತಿಯ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಕ್ರಿಕೆಟ್ ಕೂಡ ಒಂದಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸುತ್ತಿದೆ.
ಬರೋಬ್ಬರಿ 100 ವರ್ಷಗಳ ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಡಲಾಗುತ್ತದೆ. 2028 ರ ಒಲಿಂಪಿಕ್ಸ್‌ನಲ್ಲಿ ಮೊದಲ ಕ್ರಿಕೆಟ್ ಪಂದ್ಯ ಜುಲೈ 12 ರಂದು ನಡೆಯಲಿದೆ. ಅಂತಿಮ ಪಂದ್ಯ ಜುಲೈ 29 ರಂದು ನಡೆಯಲಿದೆ. ಲಾಸ್ ಏಂಜಲೀಸ್‌ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಪೊಮೆನಾದ ಫೇರ್‌ಗ್ರೌಂಡ್ಸ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿವೆ. ಪದಕ ಪಂದ್ಯಗಳು ಜುಲೈ 19 ಮತ್ತು ಜುಲೈ 29, 2028 ರಂದು ಅದೇ ಸ್ಥಳದಲ್ಲಿ ನಡೆಯಲಿವೆ. ಆದಾಗ್ಯೂ, ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿಲ್ಲ ಮತ್ತು ಒಳಗೊಂಡಿರುವ ತಂಡಗಳು ಇನ್ನೂ ಸ್ಪಷ್ಟವಾಗಿಲ್ಲ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಸ್ಪರ್ಧೆಯ ವೇಳಾಪಟ್ಟಿಯ ಪ್ರಕಾರ, ಹೆಚ್ಚಿನ ದಿನಗಳಲ್ಲಿ ಎರಡು ಪಂದ್ಯಗಳು ನಡೆಯಲಿದ್ದು, ಜುಲೈ 14 ಮತ್ತು 21 ರಂದು ಯಾವುದೇ ಪಂದ್ಯಗಳಿಲ್ಲ. ಈ ಹಿಂದೆ ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಆಡಲಾಗಿದ್ದು, 1900 ರಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ತಂಡಗಳು ಮಾತ್ರ ಭಾಗವಹಿಸಿದ್ದವು. ಸ್ಪರ್ಧೆಯ ಏಕೈಕ ಪಂದ್ಯವನ್ನು ಗೆಲ್ಲುವ ಮೂಲಕ ಗ್ರೇಟ್ ಬ್ರಿಟನ್ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.
ಪ್ರಮುಖ ಸ್ಪರ್ಧೆಯಲ್ಲಿ ಒಂದೇ ದಿನ ಮೂರು ರೇಸ್‌ಗಳು ನಡೆಯುತ್ತಿರುವುದು ಇದೇ ಮೊದಲು. ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟವು ಅಧಿಕೃತವಾಗಿ ಜುಲೈ 14 ರಿಂದ 30, 2028 ರವರೆಗೆ ನಡೆಯಲಿದೆ. ಆದರೆ ಕ್ರಿಕೆಟ್ ಮತ್ತು ಇತರ ಕೆಲವು ಸ್ಪರ್ಧೆಗಳು ಕೆಲವು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತವೆ. ಮೊದಲ ಹಂತದ ಪಂದ್ಯಗಳು ಜುಲೈ 12 ರಿಂದ 18 ರವರೆಗೆ ನಡೆಯಲಿದ್ದು, ಪದಕ ಪಂದ್ಯಗಳು ಜುಲೈ 20 ರಂದು (ಜುಲೈ 19 ಯುನೈಟೆಡ್ ಸ್ಟೇಟ್ಸ್‌ನಲ್ಲಿ) ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಜುಲೈ 22 ರಿಂದ 28 ರವರೆಗೆ ನಡೆಯಲಿದ್ದು, ಫೈನಲ್ ಜುಲೈ 29 ರಂದು ನಡೆಯಲಿದೆ. ಕ್ರೀಡಾಕೂಟವು ಮರುದಿನ ಮುಕ್ತಾಯಗೊಳ್ಳಲಿದೆ.