image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವಕಪ್ ವಿಜೇತ ತಂಡದ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನಿಂದ ಗೌರವ

ವಿಶ್ವಕಪ್ ವಿಜೇತ ತಂಡದ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನಿಂದ ಗೌರವ

ಕಲ್ಕತಾ: ಮಹಿಳಾ ವಿಶ್ವಕಪ್ ವಿಜೇತೆ, ಬಂಗಾಳದ ಆಟಗಾರ್ತಿ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನಿಂದ ಗೌರವ ಸಮರ್ಪಣೆ ಮಾಡಲಾಯಿತು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಚಾಗೆ ಬಂಗಾಳ ಸರ್ಕಾರ ಬಂಗಭೂಷಣ ಪ್ರಶಸ್ತಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಿದೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಿಚಾಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು. ವಿಶ್ವಕಪ್ ಫೈನಲ್‌ನಲ್ಲಿ ರಿಚಾ ಗಳಿಸಿದ ಪ್ರತಿ ರನ್‌ಗೆ ತಲಾ ಒಂದು ಲಕ್ಷ ರೂಪಾಯಿಯಂತೆ 34 ಲಕ್ಷ ರೂಪಾಯಿ ಚೆಕ್ ಅನ್ನು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಚಾಗೆ ನೀಡಿದರು. ವಿಶ್ವಕಪ್ ಗೆಲ್ಲುವುದು ಎಷ್ಟು ವಿಶೇಷ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದು 2003ರ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಮುನ್ನಡೆಸಿದ್ದ ನಾಯಕ ಸೌರವ್ ಗಂಗೂಲಿ ಹೇಳಿದರು. 22 ವರ್ಷದ ರಿಚಾ ಅವರ ವೃತ್ತಿಜೀವನ ಈಗಷ್ಟೇ ಆರಂಭವಾಗಿದೆ, ಭವಿಷ್ಯದಲ್ಲಿ 'ಭಾರತದ ನಾಯಕಿ ರಿಚಾ ಘೋಷ್' ಎಂದು ಕರೆಯುವಂತಾಗಲಿ ಎಂದು ಗಂಗೂಲಿ ಹಾರೈಸಿದರು. ಮುಂದಿನ ಐದಾರು ವರ್ಷಗಳಲ್ಲಿ ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭೂತಪೂರ್ವ ಬೆಳವಣಿಗೆಯನ್ನು ಕಾಣಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದರು. 

ವಿಶ್ವಕಪ್ ಗೆದ್ದ ಮೊದಲ ಬಂಗಾಳದ ಆಟಗಾರ್ತಿ ಎನ್ನುವ ಹಿರಿಮೆಗೆ ರಿಚಾ ಘೋಷ್ ಪಾತ್ರರಾದರು. ಈ ಸಮಾರಂಭದಲ್ಲಿ ಮಾಜಿ ಕ್ರಿಕೆಟರ್ ಜೂಲನ್ ಗೋಸ್ವಾಮಿ ಕೂಡ ಭಾಗವಹಿಸಿದ್ದರು. ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ರಿಚಾ ವೇಗವಾಗಿ ಗಳಿಸಿದ ರನ್‌ಗಳು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲೂ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಚಾ 24 ಎಸೆತಗಳಲ್ಲಿ 34 ರನ್ ಗಳಿಸಿ ಮಹತ್ವದ ಕೊಡುಗೆ ನೀಡಿದ್ದರು. ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 246 ರನ್‌ಗಳಿಗೆ ಆಲೌಟ್ ಆಯಿತು. ಲೀಗ್ ಹಂತದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿ ಸೆಮೀಸ್‌ನಿಂದಲೇ ಹೊರಬೀಳುವ ಭೀತಿಗೆ ಸಿಲುಕಿದ್ದ ಭಾರತ, ಆ ಬಳಿಕ ಸತತ ಗೆಲುವು ದಾಖಲಿಸಿ ಸೆಮೀಸ್‌ ಪ್ರವೇಶಿಸಿತ್ತು. ಇನ್ನು ಸೆಮೀಸ್‌ನಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಟೂರ್ನಿಯ ಅಜೇಯ ತಂಡವಾಗಿದ್ದ ಆಸ್ಟ್ರೇಲಿಯಾಗೆ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಇನ್ನು ಫೈನಲ್‌ನಲ್ಲೂ ಸಂಘಟಿತ ಪ್ರದರ್ಶನ ತೋರಿದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್ ಅಂತರದಲ್ಲಿ ಸೋಲಿಸಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.

Category
ಕರಾವಳಿ ತರಂಗಿಣಿ