ಹೈದರಬಾದ್ : ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ದೇಶದ ಪ್ರಮುಖ ಆಟೋಮೊಬೈಲ್ ಕಂಪೆನಿ ಟಾಟಾ ಮೋಟರ್ಸ್ ಭರ್ಜರಿ ಉಡುಗೊರೆ ಘೋಷಿಸಿದೆ. ನವೆಂಬರ್ 2 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 52 ರನ್ಗಳ ಜಯ ಸಾಧಿಸಿತ್ತು. ಈ ಮೂಲಕ ಭಾರತ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಐತಿಹಾಸಿಕ ಸಾಧನೆಗಾಗಿ ಇದೀಗ ಟಾಟಾ ಕಂಪೆನಿಯು ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಹೊಚ್ಚ ಹೊಸ ಟಾಟಾ ಸಿಯೆರಾ ಎಸ್‌ಯುವಿ ಕಾರನ್ನು ನೀಡುವುದಾಗಿ ತಿಳಿಸಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಈ ಉಡುಗೊರೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ, “ಭಾರತೀಯ ಮಹಿಳಾ ತಂಡವು ತನ್ನ ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ನೀಡಿದೆ. ಅವರ ಸಾಧನೆಗಳನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ. ಟಾಟಾ ಸಿಯೆರಾ ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ಒಂದು ಪರಂಪರೆಯ ಐಕಾನ್ ವಾಹನವಾಗಿದೆ. ಈ ಕಾರುಗಳನ್ನು ಇದೀಗ ಗೌರವಾನ್ವಿತ ವ್ಯಕ್ತಿಗಳಿಗೆ ನಾವು ಪ್ರತಿಷ್ಠಿತ ವಸ್ತುವನ್ನಾಗಿ ಉಡುಗೊರೆಯಾಗಿ ನೀಡುತ್ತಿದ್ದೇವೆ. ಟಾಟಾ ಸಿಯೆರಾ ಹಾಗೂ ಟೀಮ್ ಇಂಡಿಯಾ ಎರಡೂ ಸ್ಫೂರ್ತಿಯ ಸಂಕೇತಗಳು. ಹೀಗಾಗಿ ಹೊಚ್ಚ ಹೊಸ ವಿನ್ಯಾಸದ ಟಾಟಾ ಸಿಯೆರಾ ಕಾರನ್ನು ಭಾರತೀಯ ತಂಡಕ್ಕೆ ನೀಡುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ಹೇಳಿದ್ದಾರೆ. ಅಂದಹಾಗೆ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ನೀಡಲಾಗುವ ಟಾಟಾ ಸಿಯೆರಾ ಕಾರಿನ ಬೆಲೆ ಸರಿಸುಮಾರು 13.50 ಲಕ್ಷದಿಂದ 24 ಲಕ್ಷ ರೂ.
ಇದರೊಂದಿಗೆ ಉಪನಾಯಕಿ ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಮತ್ತು ರಾಧಾ ಯಾದವ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಭರ್ಜರಿ ಬಹುಮಾನ ಘೋಷಿಸಿದೆ. ಮೂವರು ಆಟಗಾರ್ತಿಯರಿಗೆ ತಲಾ 2.25 ಕೋಟಿ ರೂಪಾಯಿ ಬಹುಮಾನ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ.