ಮಂಗಳೂರು: ನಗರದ ನ್ಯೂ ಉರ್ವ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಯೋನೆಕ್ಸ್ - ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಪಂದ್ಯಾಟದ ಫೈನಲ್ ಪಂದ್ಯಗಳ ಫಲಿತಾಂಶ ವಿವರ ಇಂತಿದೆ:
ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಥಾಯ್ಲೆಂಡಿನ ಆಟಗಾರರಾದ ಹತಾಯ್‌ತಿಪ್ ಮಿಜದ್ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯು ಭಾರತದ ಶ್ರೀನಿಧಿ ನಾರಾಯಣನ್ ಮತ್ತು ರೆಶಿಕಾ ಉತಯಸೂರ್ಯನ್ ಜೋಡಿಯನ್ನು 21-7, 21-11 ಸೆಟ್‌ಗಳಿಂದ ಪರಾಭವಗೊಳಿಸಿ ಚಾಂಪಿಯನ್ ಪಟ್ಟಕ್ಕೇರಿತು. ಭಾರತದ ಜೋಡಿ ರನ್ನರ್ ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿತು.
ಮಹಿಳೆಯರ ಸಿಂಗಲ್ಸ್ ಪಂದ್ಯಾಟದಲ್ಲಿ 3ನೇ ಶ್ರೇಯಾಂಕದ ಭಾರತದ ಮಾನ್ಸಿ ಸಿಂಗ್ ಅವರು ಚಾಂಪಿಯನ್ ಆಗಿ ಆಯ್ಕೆಯಾದರು. ಅವರ ಎದುರಾಳಿ ಆಟಗಾರ್ತಿ 4ನೇ ಶ್ರೇಯಾಂಕದ ಭಾರತದ ಅಶ್ಮಿತಾ ಚಲಿಹಾ ರನ್ನರ್ ಅಪ್ ಆಗಿ ಮಾನ್ಯತೆ ಪಡೆದರು. ಸ್ಕೋರ್ ವಿವರ: 21-17, 22-20.
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮತ್ತೆ ಭಾರತದ್ದೇ ಜೋಡಿ ಮುಖಾಮುಖಿಯಾದರು. ಅಗ್ರ ಶ್ರೇಯಾಂಕದ ರಿತ್ವಿಕ್ ಸಂಜೀವಿ ಸತೀಶ್ ಕುಮಾರ್ ಚಾಂಪಿಯನ್ ಪಟ್ಟ ಗಳಿಸಿದರು. ಎದುರಾಳಿ ಆಟಗಾರ ರೌನಕ್ ಚೌಹಾಣ್ ರನ್ನರ್ ಅಪ್ ಸ್ಥಾನ ಪಡೆದರು. ಸ್ಕೋರ್ ವಿವರ: 14-21, 21-19, 21-19.
ಮಿಕ್ಸೆಡ್ ಡಬಲ್ಸ್‌ನಲ್ಲಿ ಭಾರತದ ಎರಡನೇ ಶ್ರೇಯಾಂಕದ ಧ್ರುವ ರಾವತ್ ಮತ್ತು ಮನೀಷಾ ಕೆ ಜೋಡಿಯು 18-21, 21-18 ಮತ್ತು 22-20 ಸೆಟ್‌ಗಳಿಂದ ಎದುರಾಳಿ ಥಾಯ್ಲೆಂಡಿನ ತನಾವಿನ್ ಮ್ಯಾದೀ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯನ್ನು ಮಣಿಸಿ ಚಾಂಪಿಯನ್ ಪಟ್ಟ ಗಳಿಸಿತು. ಈ ಪಂದ್ಯ ಕೊನೆಯ ವರೆಗೂ ರೋಚಕತೆಯನ್ನು ಕಾಯ್ದುಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಕೊನೆಯದಾಗಿ ನಡೆದ ಪುರುಷರ ಡಬಲ್ಸ್ ನಲ್ಲಿ ಸಿಂಗಾಪುರದ ಎರಡು ತಂಡಗಳು ಮುಖಾಮುಖಿಯಾದವು. ಎಂಗ್ ಕೀಟ್ ವೆಸ್ಲಿ ಕೊಹ್ ಮತ್ತು ಅಗ್ರ ಶ್ರೇಯಾಂಕದ ಜುನ್‌ಸ್ಯುಕೆ ಕುಬೊ ಜೋಡಿಯು ಎದುರಾಳಿ 8ನೇ ಶ್ರೇಯಾಂಕದ ಡೊನೊವನ್ ವಿಲಾರ್ಡ್ ವೀ ಮತ್ತು ಜಿಯಾ ಹವೊ ಹೊವಿನ್ ವೊಂಗ್ ಜೋಡಿಯನ್ನು 21-12, 21-17 ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.