ಹೈದರಾಬಾದ್ : ಭಾರತ ಹಾಗೂ ಪಾಕ್ ನಡುವೆ ನಡೆದ ಏಷ್ಯಾ ಕಪ್ , ಮಹಿಳೆಯರ ವಿಶ್ವ ಕಪ್ ನಲ್ಲಿ ಟೀಂ ಇಂಡಿಯಾ ಭರ್ಜರಿ ನೀಡುವ ಮೂಲಕ ಗೆದ್ದು ಬೀಗಿತು, ಇದರ ಬೆನ್ನಲ್ಲೇ ಉಭಯ ತಂಡಗಳು ಮತ್ತೆ ಮುಖಮುಖಿಯಾಗಲಿದೆ. ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಚಾಂಪಿಯನ್‌ಶಿಪ್‌ನ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ್ದು, ಅದರಂತೆ ನ.16 ರಂದು ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು ಎದುರಿಸಲಿದೆ.
ಈ ಹಿಂದೆ ಎಮರ್ಜಿಂಗ್ ಏಷ್ಯಾಕಪ್ ಎಂದು ಕರೆಯಲ್ಪಡುತ್ತಿದ್ದ ಈ ಪಂದ್ಯಾವಳಿಯು ಈಗ ನವೆಂಬರ್ 14 ರಿಂದ 23 ರವರೆಗೆ ಕತಾರ್‌ನ ದೋಹಾದಲ್ಲಿರುವ ವೆಸ್ಟ್ ಎಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿದ್ದು, ನಾಲ್ಕು ತಂಡಗಳ ಎರಡು ಗುಂಪಾಗಿ ವಿಂಗಡಿಸಲಾಗಿದೆ. ಮೊದಲ A ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಓಮನ್ ಮತ್ತು ಯುಎಇ ತಂಡಗಳು ಸ್ಥಾನ ಪಡೆದಿವೆ. ಇನ್ನು B ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ, ವಿಶೇಷ ಎಂದರೆ, ಪಂದ್ಯಾವಳಿಯ ಸ್ವರೂಪವು ಸೂಪರ್ ಫೋರ್ ಹಂತವನ್ನು ಒಳಗೊಂಡಿಲ್ಲ. ಹೀಗಾಗಿ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ.