ಮಂಗಳೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಅ.27ರಿಂದ ನ.2ರ ತನಕ ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆ ನಡಿದಿದೆ.
ಅ.27ರಂದು ಸಿಎಂ ಸಿದ್ದರಾಮಯ್ಯ ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದು, ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಯುರೋಪ್, ಅಮೇರಿಕ, ರಷ್ಯಾ, ಯುಎಇ, ಮಲೇಷ್ಯಾ, ಕೆನಡಾ, ಇಂಡೋನೇಷ್ಯಾ, ಶ್ರೀಲಂಕಾ, ಥಾಯ್ಲೆಂಡ್, ಬಾಂಗ್ಲಾದೇಶ, ಸಿಂಗಾಪುರ, ಇಂಗ್ಲೆಂಡ್, ಭಾರತ ಸೇರಿದಂತೆ 12 ದೇಶಗಳ 450 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ದೇಶದ 350 ಮತ್ತು ವಿದೇಶದ 100ರಷ್ಟು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಮುಖ್ಯ ರೆಫ್ರಿ ಮಾಲ್ಡಿವ್ಸ್ ನವರಾಗಿದ್ದು, ವಿಶ್ವದ ವಿವಿಧ ದೇಶಗಳಿಂದ 200ರಷ್ಟು ತಂತ್ರಜ್ಞರು, ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಆಹಾರ, ವಸತಿ, ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸಿಎಂ 1 ಕೋಟಿ ರೂ. ಅನುದಾನ ನೀಡಲಿದ್ದು, ಒಟ್ಟಾರೆ ಖರ್ಚು 2.5 ಕೋಟಿ ಎಂದು ಅಂದಾಜಿಸಲಾಗಿದೆ.
ಮಂಗಳೂರಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತಿದೆ. ಇದು ಮಂಗಳೂರಿಗೆ ಹೆಮ್ಮೆಯ ವಿಚಾರವಾಗಿದ್ದು, ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚಾಗಿ ನಡೆಯಬೇಕಾಗಿದೆ.
ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಾರ್ಗದರ್ಶನದಲ್ಲಿ ದ.ಕ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಪಂದ್ಯಾವಳಿಯ ಆತಿಥ್ಯ ವಹಿಸಲಿದೆ.
ಆರು ದಿನಗಳ ಕಾಲ ನಡೆಯುವ ಪಂದ್ಯಾವಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ನೇತೃತ್ವದಲ್ಲಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಶನ್ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಪಂದ್ಯಾವಳಿಗೆ ಸಕಲ ಸಿದ್ಧತೆ ನಡೆದಿದೆ.