ಹೈದರಾಬಾದ್ : ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ್ ತಂಡ ಹೊರಬಿದ್ದಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋಲುವುದರೊಂದಿಗೆ ಪಾಕ್ ತಂಡದ ಸೆಮಿಫೈನಲ್ ರೇಸ್ ಅಂತ್ಯಗೊಂಡಿದೆ. ಅತ್ತ ಪಾಕಿಸ್ತಾನ್ ವಿರುದ್ಧ 150 ರನ್ಗಳ ಭರ್ಜರಿ ಜಯ ಸಾಧಿಸಿರುವ ಸೌತ್ ಆಫ್ರಿಕಾ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಈವರೆಗೆ 6 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡ 5 ಮ್ಯಾಚ್ಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಈ ಮೂಲಕ ಒಟ್ಟು 10 ಅಂಕಗಳೊಂದಿಗೆ ಸೆಮಿಫೈನಲ್ಗೆ ಪ್ರವೇಶಿಸಿದೆ.
ಇನ್ನು ಆಡಿರುವ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಒಟ್ಟು 9 ಅಂಕಗಳನ್ನು ಪಡೆದುಕೊಂಡಿದ್ದು, ಈ ಮೂಲಕ ಸೆಮಿಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಇಲ್ಲಿ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾದ ಕಾರಣ ಒಂದು ಅಂಕ ನೀಡಲಾಗಿತ್ತು. ಅದರಂತೆ ಇದೀಗ 9 ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವು ನಾಕೌಟ್ ಹಂತಕ್ಕೇರಿದೆ. ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಮಹಿಳಾ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಿದ ಇಂಗ್ಲೆಂಡ್ ತಂಡವು ಈವರೆಗೆ ಯಾವುದೇ ಪಂದ್ಯ ಸೋತಿಲ್ಲ. ಪಾಕಿಸ್ತಾನ್ ವಿರುದ್ಧದ ಪಂದ್ಯವು ಮಳೆಯ ಕಾರಣ ರದ್ದಾಗಿದ್ದರಿಂದ ಒಂದು ಅಂಕ ಪಡೆದಿತ್ತು. ಇನ್ನುಳಿದ 4 ಮ್ಯಾಚ್ಗಳಲ್ಲೂ ಗೆಲುವು ದಾಖಲಿಸಿ ಇಂಗ್ಲೆಂಡ್ ತಂಡವು 9 ಅಂಕಗಳೊಂದಿಗೆ ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಸೆಮಿಫೈನಲ್ಗೇರಲು ಇನ್ನು ಭಾರತ, ನ್ಯೂಝಿಲೆಂಡ್, ಶ್ರೀಲಂಕಾ ತಂಡಗಳ ನಡುವೆ ಪೈಪೋಟಿ ಇದೆ. ಅದರಲ್ಲೂ ಭಾರತ ತಂಡವು ತನ್ನ ಮುಂದಿನ ಪಂದ್ಯಗಳನ್ನು ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ್ ತಂಡಗಳ ವಿರುದ್ಧ ಆಡಲಿದೆ. ಈ ಪಂದ್ಯಗಳ ಮೂಲಕ ಟೀಮ್ ಇಂಡಿಯಾದ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ.