ಚೆನ್ನೈ: ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಭರ್ಜರಿ ಗೆಲುವು ಸಾದಿಸಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರೋಹಿತ್ ನೇತೃತ್ವದ ತಂಡ 280 ರನ್‌ಗಳಿಂದ ಬಾಂಗ್ಲಾವನ್ನು ಬಗ್ಗುಬಡಿದು ಸರಣಿಯಲ್ಲಿ 1-0ರ ಮುನ್ನಡೆ ಗಳಿಸಿತು. 515 ರನ್‌ಗಳ ಬೃಹತ್ ಗುರಿ ಪಡೆದ ಎದುರಾಳಿ ತಂಡ, ಎರಡನೇ ಇನ್ನಿಂಗ್ಸ್ನಲ್ಲಿ 234 ರನ್‌ಗಳಿಗೆ ಸರ್ವಪತನಗೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಮೊದಲ ಇನ್ನಿಂಗ್ಸ್ನಲ್ಲಿ 376 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬಾಂಗ್ಲಾ 149 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 287 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿ, ಆತಿಥೇಯರಿಗೆ 515 ರನ್‌ಗಳ ಗುರಿ ನೀಡಿತು. ಆದರೆ ಬಾಂಗ್ಲಾ ಬೃಹತ್ ಗುರಿ ತಲುಪಲು ಸಾಧ್ಯವಾಗದೇ ಒಂದು ದಿನ ಮುನ್ನವೇ ಅಂದರೆ ನಾಲ್ಕನೇ ದಿನ ಪಂದ್ಯ ಮುಗಿಸಿತು.
ಮೊದಲ ಟೆಸ್ಟ್ನಲ್ಲಿ ಆಲ್ರೌಂಡರ್ ಪ್ರದರ್ಶನಕ್ಕಾಗಿ ಆರ್.ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಲು ಕೊಡುಗೆ ನೀಡಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.