image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ವಿಂಡೀಸ್‌, ಇನಿಂಗ್ಸ್‌ ಅಂತರದಲ್ಲಿ ಮೊದಲನೇ ಟೆಸ್ಟ್‌ ಗೆದ್ದ ಭಾರತ!

ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ವಿಂಡೀಸ್‌, ಇನಿಂಗ್ಸ್‌ ಅಂತರದಲ್ಲಿ ಮೊದಲನೇ ಟೆಸ್ಟ್‌ ಗೆದ್ದ ಭಾರತ!

ಹೈದರಬಾದ್ : ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಭಾರತ ತಂಡ, ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇನಿಂಗ್ಸ್‌ ಹಾಗೂ 140 ರನ್‌ಗಳ ದೊಡ್ಡ ಗೆಲುವು ಪಡೆದುಕೊಂಡಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಟೀಮ್‌ ಇಂಡಿಯಾ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಇನ್ನೂ ಎರಡೂ ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ವೆಸ್ಟ್‌ ಇಂಡೀಸ್‌, ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಬೇಕಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೂರನೇ ದಿನವಾದ ಶನಿವಾರ ಬೆಳಿಗ್ಗೆ ಭಾರತ ತಂಡ 5 ವಿಕೆಟ್‌ ನಷ್ಟಕ್ಕೆ 448 ರನ್‌ಗಳಿಗೆ ಡಿಕ್ಲೆರ್‌ ಮಾಡಿಕೊಂಡಿತು. ಹಾಗಾಗಿ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ, 276 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಅನ್ನು ಆರಂಭಿಸಿತು. ಆದರೆ, ಪ್ರಥಮ ಇನಿಂಗ್ಸ್‌ನಂತೆಯೇ ದ್ವಿತೀಯ ಇನಿಂಗ್ಸ್‌ನಲ್ಲಿಯೂ ವಿಂಡೀಸ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ರವೀಂದ್ರ ಜಡೇಜಾ (54 ಕ್ಕೆ 4) ಹಾಗೂ ಮೊಹಮ್ಮದ್‌ ಸಿರಾಜ್‌ (31 ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿದ ವಿಂಡೀಸ್‌, 45.1 ಓವರ್‌ಗಳಿಗೆ ಕೇವಲ 146 ರನ್‌ಗಳಿಗೆ ಆಲ್‌ಔಟ್‌ ಆಯಿತು. ವೆಸ್ಟ್‌ ಇಂಡೀಸ್‌ ತಂಡದ ಪರ ಎಲಿಕ್‌ ಅಥನಾಝೆ (38), ಜಸ್ಟಿನ್‌ ಗ್ರೀವ್ಸ್‌ (25) ಹಾಗೂ ಜೇಡನ್‌ ಸೀಲ್ಸ್‌ (22) ಅವರು ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ, ಇನ್ನುಳಿದ ವಿಂಡೀಸ್‌ನ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಭಾರತ ತಂಡದ ಪರ ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ರವೀಂದ್ರ ಜಡೇಜಾ, ದ್ವಿತೀಯ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ 4 ವಿಕೆಟ್‌ಗಳನ್ನು ಕಿತ್ತರು. ಆ ಮೂಲಕ ಭಾರತದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪ್ರಥಮ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಿತ್ತಿದ್ದ ಮೊಹಮ್ಮದ್‌ ಸಿರಾಜ್‌, ದ್ವಿತೀಯ ಇನಿಂಗ್ಸ್‌ನಲ್ಲಿಯೂ 3 ವಿಕೆಟ್‌ಗಳನ್ನು ಕಬಳಿಸಿದರು.

Category
ಕರಾವಳಿ ತರಂಗಿಣಿ