ದುಬೈ : ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಪ್ರಸಂಗವೊಂದರಲ್ಲಿ, ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಟ್ರೋಫಿ ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ವಿವಾದ ಪರಿಹರಿಸಲು ಭಾರತ ಸೇರಿದಂತೆ ಒಟ್ಟು 5 ದೇಶಗಳು ಶೀಘ್ರದಲ್ಲೇ ಸಭೆ ನಡೆಸಲಿವೆ. ಪಾಕಿಸ್ತಾನ ಮೂಲದವರಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ಇತ್ತೀಚೆಗೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಉದ್ಭವಿಸಿದೆ.
ಈ ಹಿನ್ನೆಲೆಯಲ್ಲಿ ದುಬೈನಲ್ಲಿ ಎಸಿಸಿ ಸಭೆ ನಡೆಯಿತು. ಆದರೆ ಚಾಂಪಿಯನ್ ಭಾರತ ತಂಡಕ್ಕೆ ಟ್ರೋಫಿ ನೀಡದಿರುವ ವಿವಾದದ ಬಗ್ಗೆ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಟೆಸ್ಟ್ ಆಡುವ ಏಷ್ಯಾದ 5 ದೇಶಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗಳಿಗೆ ವಿವಾದ ಬಗೆಹರಿಸುವ ಹೊಣೆಗಾರಿಕೆ ನೀಡಲಾಗಿದೆ. ಈ ಐದೂ ದೇಶಗಳ ಕ್ರಿಕೆಟ್ ಮಂಡಳಿಗಳು ಶೀಘ್ರದಲ್ಲೇ ಸಭೆ ನಡೆಸಲಿದ್ದು, ಕಪ್ ಹಸ್ತಾಂತರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಪಾಕಿಸ್ತಾನ ವಿರುದ್ಧ ಗೆದ್ದ ಭಾರತ ತಂಡ ಏಷ್ಯಾಕಪ್ ಚಾಂಪಿಯನ್ ಆಗಿತ್ತು. ಆದರೆ ಏಷ್ಯನ್ ಕ್ರಿಕೆಟ್ ಮುಖ್ಯಸ್ಥ, ಪಾಕಿಸ್ತಾನ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸಲು ಭಾರತ ಸಿದ್ಧವಿರಲಿಲ್ಲ. ಹೀಗಾಗಿ ಇತರ ಅಧಿಕಾರಿಗಳಿಂದ ಟ್ರೋಫಿ ಹಸ್ತಾಂತರಿಸುವ ಅವಕಾಶ ನಖ್ವಿಗೆ ಇದ್ದರೂ, ಅದನ್ನು ಮಾಡದೆ ಟ್ರೋಫಿಯನ್ನು ತಮ್ಮ ಜೊತೆ ಹೋಟೆಲ್‌ಗೆ ತೆಗೆದುಕೊಂಡು ಹೋಗಿದ್ದರು.