ದುಬೈ: ಹಾಲಿ ಚಾಂಪಿಯನ್ ಟೀಂ ಇಂಡಿಯಾ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೂಪರ್-4 ಹಂತದ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಬಾಂಗ್ಲಾದೇಶ ಎದುರು 41 ರನ್ ಅಂತರದ ಅನಾಯಾಸದ ಗೆಲುವು ದಾಖಲಿಸಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಷ್ಯಾಕಪ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಅಭಿಷೇಕ್ ಶರ್ಮಾ ವಿಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ಸಂಘಟಿತ ಪ್ರದರ್ಶನಕ್ಕೆ ಈ ಗೆಲುವು ಲಭಿಸಿದೆ. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿದೆ.
ಭಾರತ ನೀಡಿದ್ದ 169 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಜಸ್ಪ್ರೀತ್ ಬುಮ್ರಾ ತಾವೆಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಶಾಕ್ ನೀಡಿದರು. ತಂಜಿದ್ ಹಸನ್ ತಮೀಮ್ ಒಂದು ರನ್ ಗಳಿಸಿ ಶಿವಂ ದುಬೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಆದರೆ ಇದಾದ ಬಳಿಕ ಎರಡನೇ ವಿಕೆಟ್‌ಗೆ ಸೈಫ್ ಹಸನ್ ಹಾಗೂ ಪರ್ವೇಜ್ ಹೊಸೈನ್ ಎರಡನೇ ವಿಕೆಟ್‌ಗೆ 44 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಕುಲ್ದೀಪ್ ಯಾದವ್ ಬೇರ್ಪಡಿಸಿದರು. ಪರ್ವೇಜ್ 21 ರನ್ ಗಳಿಸಿದರೆ, ತೌಹಿದ್ ಹೃದಯ್(7) ಹಾಗೂ ಶಮೀಮ್ ಹೊಸೈನ್ ಖಾತೆ ತೆರೆಯದೇ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸೈಫ್ ಹಸನ್ ದಿಟ್ಟ ಹೋರಾಟ ನಡೆಸಿದರು. ಆರಂಭಿಕನಾಗಿ ಕಣಕ್ಕಿಳಿದ ಸೈಫ್ ಹಸನ್ 51 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 69 ರನ್ ಸಿಡಿಸಿ ಒಂಬತ್ತನೆಯವರಾಗಿ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶ ಪರ ಸೈಫ್ ಹಸನ್ ಹಾಗೂ ಪರ್ವೇಜ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.
ಭಾರತ ಪರ ಶಿಸ್ತುಬದ್ದ ದಾಳಿ ನಡೆಸಿದ ಕುಲ್ದೀಪ್ ಯಾದವ್ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಮತ್ತೊಮ್ಮೆ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಜೋಡಿ ಕೇವಲ 6.2 ಓವರ್‌ಗಳಲ್ಲಿ 77 ರನ್‌ಗಳ ಜತೆಯಾಟ ಪಡೆಯಿತು. ಉಪನಾಯಕ ಶುಭ್‌ಮನ್ ಗಿಲ್ ಕೇವಲ 19 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 29 ರನ್ ಸಿಡಿಸಿ ರಿಶಾದ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು.
ಪಾಕಿಸ್ತಾನ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಏಷ್ಯಾಕಪ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ, ತಮ್ಮ ಫಾರ್ಮ್ ಮತ್ತೊಮ್ಮೆ ಮುಂದುವರೆಸಿದರು. ಕೇವಲ 37 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ, 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್ ಸಿಡಿಸುವ ಮೂಲಕ ವಿಸ್ಪೋಟಕ 75 ರನ್ ಚಚ್ಚಿದರು. ಆದರೆ ಇಲ್ಲದ ರನ್ ಕದಿಯಲು ಹೋಗಿ ಅಭಿಷೇಕ್ ಶರ್ಮಾ ರನೌಟ್ ಆಗಿ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟಿಂಗ್ ಮಾಡಲಿಳಿದ ಶಿವಂ ದುಬೆ(2) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಸೂರ್ಯ 5 ರನ್ ಗಳಿಸಲು ಬರೋಬ್ಬರಿ 11 ಎಸೆತಗಳನ್ನು ವ್ಯರ್ಥ ಮಾಡಿದರು. ಇನ್ನು ಕಳೆದ ಪಂದ್ಯದ ಹೀರೋ ತಿಲಕ್ ವರ್ಮಾ ಕೂಡಾ ಕೇವಲ 5 ರನ್ ಗಳಿಸಿ ತಂಜೀಮ್ ಹಸನ್ ಶಕಿಬ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ 29 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 38 ರನ್ ಬಾರಿಸಿ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.