ಚೀನಾ : ಭಾರತೀಯ ಪುರುಷರ ತಂಡದ ಏಷ್ಯಾ ಕಪ್ ಹಾಕಿ ಸಾಧನೆಯನ್ನು ವನಿತೆಯರೂ ಪುನರಾವರ್ತಿಸುವರೇ ಎಂಬ ಕುತೂಹಲ ಮೂಡಿಸಿದೆ. ಕಾರಣ, ವನಿತಾ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಚೀನಾ ಫೈನಲ್‌ಗೆ ಪ್ರವೇಶಿಸಿವೆ. ಭಾನುವಾರ ಪ್ರಶಸ್ತಿ ಸೆಣಸಾಟ ಏರ್ಪಡಲಿದೆ. ವನಿತಾ ಏಷ್ಯಾ ಕಪ್ ಕೂಟದ ಶನಿವಾರದ ಸೂಪರ್-4 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ-ಜಪಾನ್ ಪಂದ್ಯ 1-1 ಅಂತರದಿಂದ ಡ್ರಾಗೊಂಡರೆ, ಇನ್ನೊಂದು ಪಂದ್ಯದಲ್ಲಿ ಚೀನಾ 1-0 ಅಂತರದಿಂದ ದಕ್ಷಿಣ ಕೊರಿಯಾವನ್ನು ಮಣಿಸಿತು. ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಬ್ಯೂಟಿ ಡುಂಗ್ ಡುಂಗ್ ಆರಂಭದಲ್ಲೇ ಗೋಲೊಂದನ್ನು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. 58ನೇ ನಿಮಿಷದಲ್ಲಿ ಕೊಬಾಯಕಾವಾ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಭಾರತ-ಜಪಾನ್ ನಡುವಿನ ಎರಡೂ ಪಂದ್ಯ ಡ್ರಾಗೊಂಡಿತು. ಲೀಗ್ ಹಂತದಲ್ಲಿ ಇತ್ತಂಡಗಳ ನಡುವಿನ ಪಂದ್ಯ 2-2ರಿಂದ ಸಮನಾಗಿತ್ತು. ಜಪಾನ್ ವಿರುದ್ಧದ ಸೂಪರ್-4 ಪಂದ್ಯವನ್ನು ಜಯಿಸಿದ್ದೇ ಆದರೆ ಭಾರತ ನೇರವಾಗಿ ಫೈನಲ್‌ಗೆ ಲಗ್ಗೆ ಇಡುತ್ತಿತ್ತು. ಆದರೆ ಪಂದ್ಯ ಡ್ರಾಗೊಂಡಿದ್ದರಿಂದ ಚೀನ-ದಕ್ಷಿಣ ಕೊರಿಯಾ ಫಲಿತಾಂಶಕ್ಕೆ ಕಾಯಬೇಕಾಯಿತು. ಚೀನ ಈಗಾಗಲೇ ಫೈನಲ್ ತಲುಪಿತ್ತು. ದಕ್ಷಿಣ ಕೊರಿಯಾ ಕನಿಷ್ಠ 2 ಗೋಲುಗಳ ಅಂತರದಿಂದ ಜಯಿಸಿದರೆ ಭಾರತವನ್ನು ಮೀರಿಸಿ ಫೈನಲ್‌ಗೆ ನೆಗೆಯುತ್ತಿತ್ತು. ಆದರೆ ಚೀನ ಜಯ ಸಾಧಿಸುವುದರೊಂದಿಗೆ ಭಾರತದ ಹಾದಿ ಸುಗಮಗೊಂಡಿತು.