ಹಾಂಗ್‌ಜೂ: ನವನೀತ್ ಕೌರ್ ಮತ್ತು ಮುಮ್ತಾಜ್ ಖಾನ್ ಅವರ ಹ್ಯಾಟ್ರಿಕ್ ಸಾಹಸದಿಂದ ವನಿತಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಸಿಂಗಾಪುರವನ್ನು 12-0 ಗೋಲುಗಳಿಂದ ಸೋಲಿಸಿದ ಭಾರತ, "ಬಿ' ವಿಭಾಗದ ಅಗ್ರಸ್ಥಾನಿಯಾಗಿ ಸೂಪರ್-4 ಹಂತಕ್ಕೆ ನೆಗೆದಿದೆ. ಮುಖಾಮುಖಿಯಲ್ಲಿ ಮುಮ್ತಾಜ್ ಖಾನ್ 2ನೇ ನಿಮಿಷದಲ್ಲೇ ಭಾರತದ ಖಾತೆ ತೆರೆದರು. ಬಳಿಕ 32 ಮತ್ತು 38ನೇ ನಿಮಿಷದಲ್ಲಿ ಮತ್ತೆರಡು ಗೋಲು ಬಾರಿಸಿ ಹ್ಯಾಟ್ರಿಕ್ ಪೂರ್ತಿಗೊಳಿಸಿದರು. ನವನೀತ್ ಕೌರ್ 14, 18 ಮತ್ತು 28ನೇ ನಿಮಿಷದಲ್ಲಿ ಗೋಲು ಹೊಡೆದರು. ಉಳಿದ ಗೋಲು ಸಾಧಕಿಯರೆಂದರೆ ನೇಹಾ (11 ಮತ್ತು 38ನೇ ನಿಮಿಷ), ಲಾಲ್ರೆಮಿಯಾಮಿ (13ನೇ ನಿಮಿಷ) ಶರ್ಮಿಳಾದೇವಿ (45ನೇ ನಿಮಿಷ) ಮತ್ತು ಋತುಜಾ ಪಿಸಾಲ್ (52ನೇ ನಿಮಿಷ). ವಿಶ್ವದ 10ನೇ ರ್‍ಯಾಂಕ್ ತಂಡವಾದ ಭಾರತ ಮೊದಲ ಪಂದ್ಯದಲ್ಲಿ ಥಾಯ್ಲೆಂಡನ್ನು 11-0 ಗೋಲುಗಳಿಂದ ಮಣಿಸಿತ್ತು. ಬಳಿಕ ಜಪಾನ್ ವಿರುದ್ಧ 2-2 ಡ್ರಾ ಸಾಧಿಸಿತು. "ಬಿ' ವಿಭಾಗದಿಂದ ಸೂಪರ್-4 ಪ್ರವೇಶಿಸಿದ ಮತ್ತೂಂದು ತಂಡ ಜಪಾನ್. ಭಾರತ ಮತ್ತು ಜಪಾನ್ ಎರಡೂ ಸಮಬಲ ಸಾಧನೆ ದಾಖಲಿಸಿವೆ (2 ಜಯ, 1 ಡ್ರಾ). ಆದರೆ ಗೋಲು ಗಳಿಕೆಯ ಲೆಕ್ಕಾಚಾರದಲ್ಲಿ ಮುಂದಿದ್ದ ಭಾರತ ಅಗ್ರಸ್ಥಾನದ ಗೌರವ ಪಡೆಯಿತು. ಭಾರತ ತನ್ನ ಮೊದಲ ಸೂಪರ್-4 ಪಂದ್ಯವನ್ನು ಸೆ. 10ರಂದು ಆಡಲಿದೆ. ಇಲ್ಲಿ "ಎ' ವಿಭಾಗದ ದ್ವಿತೀಯ ಸ್ಥಾನಿಯನ್ನು ಎದುರಿಸಲಿದೆ.