image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೇರಿಕನ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಲ್ಕರಾಜ್ ಮತ್ತು ಜೋಕೋವಿಚ್

ಅಮೇರಿಕನ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಅಲ್ಕರಾಜ್ ಮತ್ತು ಜೋಕೋವಿಚ್

ನ್ಯೂಯಾರ್ಕ್: ಘಟಾನುಘಟಿಗಳಾದ ಕಾರ್ಲೋಸ್‌ ಅಲ್ಕರಾಜ್ ಮತ್ತು ನೊವಾಕ್ ಜೊಕೊವಿಚ್‌ ಅವರು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಲ್ಲಿ ಭಾನುವಾರ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು. ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಸಹ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟರು. ಎರಡನೇ ಶ್ರೇಯಾಂಕದ ಅಲ್ಕರಾಜ್ ಮತ್ತು ಏಳನೇ ಶ್ರೇಯಾಂಕದ ಜೊಕೊವಿಚ್‌ ಅವರು ಸೆಮಿಫೈನಲ್ ಮುಖಾಮುಖಿಯಾಗುವತ್ತ ಸಾಗಿದ್ದಾರೆ. ಆರ್ಥರ್ ಆಯಷ್ ಕ್ರೀಡಾಂಗಣದಲ್ಲಿ ಇಬ್ಬರೂ ನೇರ ಸೆಟ್‌ಗಳ ಗೆಲುವನ್ನು ದಾಖಲಿಸಿದರು. ಐದು ಪ್ರಶಸ್ತಿ ಗೆದ್ದಿರುವ ಅಲ್ಕರಾಜ್‌ 7-6 (7-3), 6-3, 6-4 ರಿಂದ ಫ್ರಾನ್ಸ್‌ನ ಆರ್ಥರ್ ರಿಂಡಕ್‌ನೆಷ್‌ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಈ ಬಾರಿಯ ಅಭಿಯಾನದಲ್ಲಿ ಸ್ಪೇನ್‌ನ ಆಟಗಾರ ಒಂದೂ ಸೆಟ್‌ ಬಿಟ್ಟುಕೊಟ್ಟಿಲ್ಲ. 22 ವರ್ಷ ವಯಸ್ಸಿನ ಅಲ್ಕರಾಜ್‌, ಮಂಗಳವಾರ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ 20ನೇ ಶ್ರೇಯಾಂಕದ ಜಿರಿ ಲೆಹೆಕಾ ಅವರನ್ನು ಎದುರಿಸಲಿದ್ದಾರೆ. ಝೆಕ್‌ ಆಟಗಾರ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಅಡ್ರಿಯಾನ್ ಮನ್ನಾರಿನೊ ಅವರನ್ನು 7-6 (7/4), 6-4, 2-6, 6-2 ರಿಂದ ಸೋಲಿಸಿದರು. ಜಿರಿ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಎಂಟರ ಘಟ್ಟಕ್ಕೆ ತಲುಪುತ್ತಿರುವುದು ಇದು ಎರಡನೇ ಸಲ. ಜೊಕೊ ಮುನ್ನಡೆ: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಇನ್ನಿಲ್ಲದ ಯತ್ನದಲ್ಲಿರುವ 38 ವರ್ಷ ವಯಸ್ಸಿನ ಜೊಕೊವಿಚ್‌ 6-3, 6-3, 6-2 ರಿಂದ ಶ್ರೇಯಾಂಕರಹಿತ ಜಾನ್-ಲೆನಾರ್ಡ್‌ ಸ್ಟ್ರುಫ್‌ (ಜರ್ಮನಿ) ಅವರನ್ನು ಹಿಮ್ಮೆಟ್ಟಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಜೊಕೊವಿಚ್‌, ನಾಲ್ಕನೇ ಶ್ರೇಯಾಂಕದ ಟೇಲರ್‌ ಫ್ರಿಟ್ಝ್‌ ಅವರನ್ನು ಎದುರಿಸಲಿದ್ದಾರೆ. ಕಣದಲ್ಲುಳಿದಿರುವ ಅಮೆರಿಕದ ಏಕೈಕ ಆಟಗಾರ ಫ್ರಿಟ್ಝ್‌ 6-4, 6-3, 6-3 ರಿಂದ ಝೆಕ್‌ ರಿಪಬ್ಲಿಕ್‌ನ ಥಾಮಸ್‌ ಮಚಾಕ್ ಅವರನ್ನು ಸೋಲಿ ಸಲು 1 ಗಂಟೆ 38 ನಿ. ತೆಗೆದುಕೊಂಡರು. ಜೊಕೊವಿಚ್‌ ಅವರು ಹತ್ತು ಬಾರಿ ಫ್ರಿಟ್ಝ್‌ ಅವರಿಗೆ ಮುಖಾಮುಖಿಯಾಗಿದ್ದು, ಒಮ್ಮೆಯೂ ಸೋತಿಲ್ಲ.

Category
ಕರಾವಳಿ ತರಂಗಿಣಿ