image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವ ಬಿಡ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸುವ ಬಿಡ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಸಲ್ಲಿಕೆ ಪ್ರಕ್ರಿಯೆಗೆ ಅನುಮೋದನೆ ನೀಡಲಾಗಿದೆ. ಬಿಡ್ ಯಶಸ್ವಿಯಾದರೆ ಕೇಂದ್ರವು ಗುಜರಾತ್ ಸರ್ಕಾರಕ್ಕೆ ಅಗತ್ಯ ಅನುದಾನ ನೀಡಲಿದೆ. ಕ್ರೀಡಾಕೂಟದ ಆತಿಥ್ಯ ವಹಿಸಲು ಅಹಮದಾಬಾದ್ ಯೋಗ್ಯ ನಗರವೆಂದು ಆಯ್ಕೆ ಮಾಡಲಾಗಿದೆ. ಬಿಡ್ ಸಲ್ಲಿಸಲು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಸಂಪುಟದಿಂದ ಒಪ್ಪಿಗೆ ಸೂಚಿಸಲಾಗಿದೆ. ಬಿಡ್ ಯಶಸ್ವಿಯಾದರೆ ಭಾರತವು 2010ರ ಬಳಿಕ ಮೊದಲ ಬಾರಿಗೆ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸಲಿದೆ. ಆತಿಥ್ಯಕ್ಕೆ ಬೆಂಬಲವಾಗಿ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಅಧಿಕಾರಿಗಳು ಅಗತ್ಯ ದಾಖಲೆಗಳಿಗೆ ಸಹಿ ಹಾಕುವುದನ್ನು ಸಂಪುಟದ ಅನುಮೋದನೆಯು ಒಳಗೊಂಡಿದೆ. "ಭಾರತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸುವುದರಿಂದ ಕ್ರೀಡೆಗಳನ್ನು ಮೀರಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಉದ್ಯೋಗ ಸೃಷ್ಟಿ ಮತ್ತು ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಸಿಗಲಿದೆ. ಇಂತಹ ಪ್ರತಿಷ್ಠಿತ ಜಾಗತಿಕ ಕೂಟದ ಆಯೋಜನೆಯಿಂದ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಬಲವಾದ ಪ್ರಜ್ಞೆ ಬೆಳೆಯುತ್ತದೆ. ಅಲ್ಲದೆ, ನಮ್ಮ ರಾಷ್ಟ್ರದ ಮನೋಸ್ಥೈರ್ಯವೂ ಹೆಚ್ಚಲಿದೆ. ಜೊತೆಗೆ, ಹೊಸ ಪೀಳಿಗೆಯ ಕ್ರೀಡಾಪಟುಗಳು ಕ್ರೀಡೆಗಳನ್ನು ವೃತ್ತಿ ಆಯ್ಕೆಯಾಗಿ ಮಾಡಿಕೊಂಡು, ಈ ಕ್ಷೇತ್ರಕ್ಕೆ ಹೆಚ್ಚೆಚ್ಚು ಪ್ರವೇಶಿಸಲು ಸ್ಫೂರ್ತಿ ನೀಡುತ್ತದೆ. ಹಾಗೂ ಎಲ್ಲಾ ಹಂತಗಳಲ್ಲಿ ಕ್ರೀಡೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ" ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೂಟದ ಆಯೋಜನೆಯು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲೂ ನಡೆಯಲಿದೆ. ಈ ಹಿಂದೆ ಇಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ಕ್ರೀಡಾಂಗಣವು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅಹಮದಾಬಾದ್ ನಗರವು ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿಯನ್ನು ಹೊಂದಿರುವ ನಗರವಾಗಿದೆ ಎಂದು ಉಲ್ಲೇಖಿಸಲಾಗಿದೆ.

Category
ಕರಾವಳಿ ತರಂಗಿಣಿ