ಚಾಂಗ್‌ಝ: ವಿಶ್ವದ ಆರನೇ ಕ್ರಮಾಂಕದ ಆಟಗಾರ್ತಿ ಟೊಮೊಕಾ ಮಿಯಾಝಾಕಿ ಅವರನ್ನು ಸೋಲಿಸುವ ಮೂಲಕ ಭಾರತದ ಪಿ.ವಿ.ಸಿಂಧು ಚೀನಾ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಭರವಸೆಯ ಆರಂಭ ಮಾಡಿದರು. ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿರುವ ಸಿಂಧು 21-15, 8-21, 21-17 ರಿಂದ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಮಿಯಾಝಾಕಿ ಅವರನ್ನು ಸೋಲಿಸಿದರು. 62 ನಿಮಿಷಗಳಲ್ಲಿ ಗೆದ್ದ ಹೈದರಾಬಾದಿನ ಆಟಗಾರ್ತಿ ಪ್ರಿಕ್ವಾರ್ಟ‌್ರಫೈನಲ್ ತಲುಪಿದರು.
'ಇದು ನಾನು ಬಹುಕಾಲದಿಂದ ಕಾಯುತ್ತಿದ್ದ ಗೆಲುವು. ಮೊದಲ ಸುತ್ತು ದಾಟುವುದು ನನಗೆ ಬಹಳ ಮಹತ್ವದ್ದಾಗಿತ್ತು' ಎಂದು 30 ವರ್ಷ ವಯಸ್ಸಿನ ಸಿಂಧು ಪ್ರತಿಕ್ರಿಯಿಸಿದರು. 'ನಾನು ಉತ್ತಮ ಆರಂಭ ಮಾಡಿದೆ. ಆದರೆ ಎರಡನೇ ಗೇಮ್‌ನಲ್ಲಿ ನಿಯಂತ್ರಣ ಸಾಧಿಸುವುದು ಕಠಿಣವಾಯಿತು. ಮೂರನೇ ಗೇಮ್‌ನಲ್ಲಿ ಆರಂಭದಲ್ಲೇ ಲೀಡ್ ಪಡೆದು ಅದನ್ನು ಕಾಪಾಡಿಕೊಳ್ಳುವುದು ನನಗೆ ಮುಖ್ಯವಾಗಿತ್ತು' ಎಂದೂ ಹೇಳಿದರು. ಭಾರತದ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಸ್ವದೇಶದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರನ್ನು ಎದುರಿಸಲಿದ್ದಾರೆ.