ಕ್ರೊಯೇಷಿಯಾ : ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಶುಕ್ರವಾರ ನಡೆದ ಸೂಪರ್ ಯುನೈಟೆಡ್ ರಾಪಿಡ್ & ಬ್ಲಿಟ್ಜ್ ಚೆಸ್ ಟೂರ್ನಿಯ ರಾಪಿಡ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಮತ್ತೊಂದು ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಸ್ಪರ್ಧೆಯು 2025ರ ಗ್ರ್ಯಾಂಡ್ ಚೆಸ್ ಟೂರಿನ ಭಾಗವಾಗಿದ್ದು, ಕ್ರೊಯೇಷಿಯಾದ ಜಾಗ್ರೆಬ್ನಲ್ಲಿ ನಡೆಯುತ್ತಿದೆ. 19 ವರ್ಷದ ಭಾರತೀಯ ಆಟಗಾರ ನಿಖರತೆ, ಸಂಯಮ ಮತ್ತು ಅದ್ಭುತ ಫಾರ್ಮ್ ಪ್ರದರ್ಶಿಸಿ ಸಂಭಾವ್ಯ 18 ಅಂಕಗಳಲ್ಲಿ 14 ಅಂಕಗಳೊಂದಿಗೆ ಟೂರ್ನಮೆಂಟ್ನಲ್ಲಿ ಅಗ್ರಸ್ಥಾನ ಪಡೆದರು.
ಗುಕೇಶ್ ಟೂರ್ನಮೆಂಟ್ನಲ್ಲಿ ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಸುತ್ತಿನಲ್ಲಿ ಜಾನ್-ಕ್ರಿಜ್ಟೋಫ್ ಡುಡಾ ವಿರುದ್ಧ ಸೋತಿದ್ದರು. ಆದಾಗ್ಯೂ, ಬಳಿಕ ಅವರು ಸತತ ಐದು ಜಯಗಳೊಂದಿಗೆ, ಟೂರ್ನಿಯಲ್ಲಿ ಹಾದಿಯನ್ನೇ ಬದಲಿಸಿಕೊಂಡರು. ಇದರಲ್ಲಿ 4ನೇ ಸುತ್ತಿನಲ್ಲಿ ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ಅದ್ಭುತ ಗೆಲುವು ಸೇರಿದಂತೆ, ಈ ಫಲಿತಾಂಶವು ಅವರನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿ ಇರಿಸಿತು. ಅಂತಿಮ ಸುತ್ತಿನಲ್ಲಿ ಯುನೈಟೆಡ್ ಸ್ಟೇಟ್ಸ್ ನ ವೆಸ್ಲಿ ಸೋ ವಿರುದ್ಧ ಜಯ ಗಳಿಸುವ ಮೂಲಕ ಅವರು ರಾಪಿಡ್ ವಿಭಾಗದಲ್ಲಿ ಅಭಿಯಾನವನ್ನು ಕೊನೆಗೊಳಿಸಿದರು. ಗುಕೇಶ್ 36-ನಡೆಗಳ ಸಮನ್ವಯದ ಪ್ರದರ್ಶನ ತೋರಿದರು. ಈ ಮೂಲಕ ಎರಡು ಪೂರ್ಣ ಅಂಕಗಳು ಲಭಿಸಿದವು. ಟೂರ್ನಿಯಲ್ಲಿ ಅವರ ಅದ್ಭುತ ಓಟದಲ್ಲಿ, ಆರು ಗೆಲುವುಗಳು, ಎರಡು ಡ್ರಾಗಳು ಮತ್ತು ಒಂದು ಸೋಲು ಕಂಡರು. 3ನೇ ದಿನದಂದು ಗುಕೇಶ್ ಅವರ ಅಭಿಯಾನವು ಡಚ್ ಗ್ರ್ಯಾಂಡ್ ಮಾಸ್ಟರ್ ಅನೀಶ್ ಗಿರಿ ವಿರುದ್ಧ ಡ್ರಾದೊಂದಿಗೆ ಪ್ರಾರಂಭವಾಯಿತು. ಆಟದ ಮಧ್ಯಮ ಭಾಗವನ್ನು ತಲುಪಿದಾಗ, ಇಬ್ಬರೂ ಎದುರಾಳಿಗಳು ಕೈಕುಲುಕಿದರು. ದಿನದ ಎರಡನೇ ಪಂದ್ಯದಲ್ಲಿ, ಕ್ರೊಯೇಷಿಯಾದ ಇವಾನ್ ಅರಿಕ್ ವಿರುದ್ಧ 87-ನಡೆಗಳ ಮುಖಾಮುಖಿಯಲ್ಲಿ ಗುಕೇಶ್ ಮಾರ್ಷಲ್ ಗ್ಯಾಂಬಿಟ್ ಅನ್ನು ಬಳಸಿಕೊಂಡರು. ಈ ಮುಖಾಮುಖಿಯೂ ಕೂಡ ರೋಚಕ ಡ್ರಾದಲ್ಲಿ ಕೊನೆಗೊಂಡಿತು.
ವಿಶ್ವದ ನಂ. 1 ಮ್ಯಾಗ್ನಸ್ ಕಾರ್ಲ್ಸನ್ ತನ್ನ ಆರಂಭಿಕ ಪಂದ್ಯದಲ್ಲಿ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸುವ ಮೂಲಕ ಉತ್ತಮ ಆರಂಭದೊಂದಿಗೆ ದಿನವನ್ನು ಪುನರಾರಂಭಿಸಿದರು. ಆದರೆ ನೋಡಿರ್ಬೆಕ್ ಅಬ್ದುಸತ್ತೊರೊವ್ ವಿರುದ್ಧದ ಮುಂದಿನ ಮುಖಾಮುಖಿಯಲ್ಲಿ ಡ್ರಾ ಸಾಧಿಸಿದ್ದರಿಂದ ಅಗ್ರ ಸ್ಪರ್ಧಿಗಳೊಂದಿಗೆ ಅಂತರವನ್ನು ಕಡಿಮೆ ಮಾಡುವ ಅವಕಾಶವನ್ನು ಕಳೆದುಕೊಂಡರು. ಟೂರ್ನಮೆಂಟ್ನಲ್ಲಿ ಗುಕೇಶ್ ಅವರನ್ನು ಸೋಲಿಸಿದ್ದ ಏಕೈಕ ಆಟಗಾರ ದುಡಾ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು.