ಬರ್ಮಿಂಗ್ ಹ್ಯಾಮ್ : ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯ 2ನೇ ಪಂದ್ಯದ ಮೇಲೆ ಭಾರತ ಹಿಡಿತ ಸಾಧಿಸಿದೆ. ಬರ್ಮಿಂಗ್ಹ್ತಾಮ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 587 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿ ಆಲೌಟ್ ಆಗಿದೆ. 310 ರನ್ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ ನಾಯಕ ಶುಭ್ಮನ್ ಗಿಲ್, ಜಡೇಜಾ ಮತ್ತ ವಾಷಿಂಗ್ಟನ್ ಸುಂದರ್ ಅವರ ಬ್ಯಾಟಿಂಗ್ ಸಹಾಯದಿಂದ ಈ ದೊಡ್ಡ ಗುರಿ ಸಾಧಿಸಲು ಸಾಧ್ಯವಾಯ್ತು. ಅದರಲ್ಲೂ ನಾಯಕ ಗಿಲ್ ದ್ವಿಶತಕ ಸಿಡಿಸುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೊದಲ ದಿನದಂದು 199 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಶತಕ ಗಳಿಸಿದ್ದ ಗಿಲ್ ಮೊದಲ ದಿನದ ಆಟದ ಅಂತ್ಯದ ವೇಳೆಗೆ ಅವರು 226 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ 114 ರನ್ ಕಲೆಹಾಕಿದ್ದರು. ಎರಡನೇ ದಿನದಂದು, ಗಿಲ್ ತಮ್ಮ ಇನ್ನಿಂಗ್ಸ್ ಅನ್ನು ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು, 311 ಎಸೆತಗಳನ್ನು ಎದುರಿಸಿ ಎರಡನೇ ಸೆಷನ್‌ನಲ್ಲಿ 21 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 200 ರನ್‌ಗಳನ್ನು ಪೂರ್ಣಗೊಳಿಸಿದರು.
ಒಟ್ಟಾರೆ ತಮ್ಮ ಇನ್ನಿಂಗ್ಸ್ನಲ್ಲಿ 387 ಎಸೆತಗಳಲ್ಲಿ 30 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ ಬರೋಬ್ಬರಿ 269 ರನ್ ಚಚ್ಚಿದ ಬಳಿಕ ವಿಕೆಟ್ ಒಪ್ಪಿಸಿದರು. ಶಾಟ್ ಆಡಲು ಯತ್ನಿಸಿದ ಗಿಲ್ ಸ್ವಲ್ಪ ಅಂತದಲ್ಲೇ ತ್ರಿಶತಕವನ್ನು ತಪ್ಪಿಸಿಕೊಂಡರು. ಆದರೂ ಅವರ ಈ ಇನ್ನಿಂಗ್ಸ್ ಇಂಗ್ಲೆಂಡ್ ಮೇಲೆ ಭಾರತ ಪ್ರಾಬಲ್ಯ ಸಾಧಿಸಲು ಸಹಾಯಕವಾಗಿದೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಟೆಸ್ಟ್ ನಾಯಕನಾಗಿ ಗಿಲ್ ಅತ್ಯಧಿಕ ರನ್ ಗಳಿಸಿದ್ದಾರೆ. 1990ರಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಮೊಹಮ್ಮದ್ ಅಜರುದ್ದೀನ್ 179 ರನ್‌ಗಳನ್ನು ಸಿಡಿಸುವ ಮೂಲಕ ಬರೆದಿದ್ದ ದಾಖಲೆಯನ್ನು ಗಿಲ್ ಅಳಿಸಿ ಹಾಕಿದ್ದಾರೆ. 2018 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ 149 ರನ್‌ಗಳಿಸಿದ್ದ ವಿರಾಟ್ ಕೊಹ್ಲಿ ಇದೀಗ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇದರೊಂದಿಗೆ, ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಏಷ್ಯಾದ ನಾಯಕ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.