ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ಮಾಜಿ ಪತ್ನಿ ಹಸೀನ್ ಜಹಾನ್ ಅವರಿಗೆ ಪ್ರತೀ ತಿಂಗಳು 4 ಲಕ್ಷ ರೂ ನಿರ್ವಹಣಾ ಭತ್ಯೆ ನೀಡಬೇಕು. ಇದರಲ್ಲಿ 1.5 ಲಕ್ಷ ರೂ ಪತ್ನಿಗೆ ಹಾಗೂ ಉಳಿದ 2.5 ಲಕ್ಷ ಮಗಳ ಆರೈಕೆಗೆ ಎಂದು ಕೋಲ್ಕತ್ತಾ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಇದಲ್ಲದೆ ಕಳೆದ 7 ವರ್ಷದ ನಿರ್ವಹಣಾ ಭತ್ಯೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದು, ಇದರ ಒಟ್ಟು ಮೊತ್ತ 3.36 ಕೋಟಿ ರೂ ಆಗುತ್ತದೆ. ಇದಕ್ಕೂ ಮೊದಲು ಹಸೀನ್ ಜಹಾನ್ ಪ್ರತೀ ತಿಂಗಳು 7 ಲಕ್ಷ ರೂ ಭತ್ಯೆ ನೀಡುವಂತೆ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಈ ಹಿಂದೆ ಅಲಿಪುರ ನ್ಯಾಯಾಲಯವು ಮಾಜಿ ಪತ್ನಿ ಹಾಗೂ ಮಗುವಿಗೆ ಪ್ರತೀ ತಿಂಗಳು 80,000 ನೀಡುವಂತೆ ಶಮಿಗೆ ಆದೇಶಿಸಿತ್ತು. ಬಳಿಕ ಬದಲಾವಣೆ ಮಾಡಿ, ಪತ್ನಿಗೆ 50,000 ಹಾಗೂ ಪುತ್ರಿಗೆ 80,000 ರೂ ನೀಡುವಂತೆ ಆದೇಶಿಸಿದ್ದರು. ಮೊಹಮ್ಮದ್ ಶಮಿ 2014ರಲ್ಲಿ ಮಾಡೆಲ್ ಹಸೀನ್ ಜಹಾನ್ ಅವರನ್ನು ವರಿಸಿದ್ದರು. 2015ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮುಂದಿನ ದಿನಗಳಲ್ಲಿ ಹಸೀನ್ ಅವರು ಶಮಿ ಮೇಲೆ ಕೌಟುಂಬಿಕ ಹಿಂಸೆ ಮತ್ತು ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವ ಗಂಭೀರ ಆರೋಪಗಳನ್ನು ಮಾಡಿದ್ದರು. 2018ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2022ರಲ್ಲಿ ವಿಚ್ಛೇದನ ಪಡೆದಿದ್ದರು.