ಬೆಂಗಳೂರು: ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಗುತ್ತಿಗೆ ಒಪ್ಪಂದದಲ್ಲಿ ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಲಿಬಾಲ್ ಹಾಗೂ ಬಾಸ್ಕೆಟ್‌ಬಾಲ್ ತರಬೇತುದಾರರ ವರ್ಗಾವಣೆ ಮಾಡಿ ಹೊರಡಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ವರ್ಗಾವಣೆ ಆದೇಶ ಪ್ರಶ್ನಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ದಾವಣಗೆರೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವಾಲಿಬಾಲ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಿರ್ಜಾ ಷಾ ಜಮಾ, ಬೆಳಗಾವಿ ಉಪ ನಿರ್ದೇಶಕರ ಕಚೇರಿಯಲ್ಲಿ ಬಾಸ್ಕೆಟ್‌ಬಾಲ್ ತರಬೇತುದಾರಗಿದ್ದ ವೀರಣ್ಣಗೌಡ ಎಸ್. ಪಾಟೀಲ್, ವಾಲಿಬಾಲ್ ತರಬೇತುದಾರ ಎನ್.ಎ. ಮೀರಜ್‌ಕರ್, ಧಾರವಾಡ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬಾಸ್ಕೆಟ್‌ಬಾಲ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಕೆ. ಹಸನ್‌ಕರ್ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ತರಬೇತುದಾರರು ಕ್ಷೇಮಾಭಿವೃದ್ಧಿ ಸಂಘ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ನ್ಯಾಯಪೀಠ, ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕಳೆದ 28 ವರ್ಷಗಳಿಂದ ಗುತ್ತಿಗೆ ಒಪ್ಪಂದದಲ್ಲಿ ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕ ಸೇವಕರು (ಸರ್ಕಾರಿ ನೌಕರರು) ಅಲ್ಲ. ಆದಾಗ್ಯೂ 2017ರಲ್ಲಿ ಅರ್ಜಿದಾರರನ್ನು ಸೇರಿದಂತೆ 54 ಮಂದಿ ತರಬೇತುದಾರರನ್ನು ಸಾರ್ವತ್ರಿಕ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವೆ ಕಾಯಂಗೊಳಿಸಬೇಕು ಎಂಬ ಅರ್ಜಿದಾರರ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಹೀಗಿದ್ದಾಗ ನಾಲ್ವರು ಅರ್ಜಿದಾರರನ್ನು ವರ್ಗಾವಣೆಗೊಳಿಸಿ ಕ್ರೀಡಾ ಪ್ರಾಧಿಕಾರ 2025ರ ಜೂನ್ 26ರಂದು ಆದೇಶ ಹೊರಡಿಸಿದೆ. ಈ ಆದೇಶ ರದ್ದುಗೊಳಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದರು.