ಅಮೆರಿಕ : ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಅಮೆರಿಕ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಮಹಿಳೆಯರ ಸಿಂಗಲ್ಸ್‌ನಲ್ಲಿ ತನ್ವಿ ಶರ್ಮಾ ರನ್ನರ್ಸ್-ಅಪ್ ಆದರು. ನಾಲ್ಕನೇ ಶ್ರೇಯಾಂಕದ, ಕನ್ನಡಿಗ ಆಯುಷ್ ಅವರು ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ 21-18, 21-13ರ ನೇರ ಗೇಮ್‌ಗಳಿಂದ ಮೂರನೇ ಶ್ರೇಯಾಂಕದ ಬ್ರಯನ್ ಯಂಗ್ ಅವರನ್ನು ಮಣಿಸಿದರು. ಈ ಮೂಲಕ, ತಮ್ಮ ಚೊಚ್ಚಲ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ರೋಚಕವಾಗಿ ಸಾಗಿದ ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ 16-16ರಿಂದ ಉಭಯ ಆಟಗಾರರು ಸಮಬಲದ ಹೋರಾಟ ಸಾಧಿಸಿದ್ದರು. ಕೊನೆಯಲ್ಲಿ ಹಿಡಿತ ಸಾಧಿಸಿದ ಭಾರತದ ಆಟಗಾರ, ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನಲ್ಲಿಯೂ ಎದುರಾಳಿಯ ಸವಾಲನ್ನು ಸಮರ್ಥವಾಗಿ ಎದುರಿಸಿದ ಆಯುಷ್, ತಮ್ಮ ಕ್ರಾಸ್-ಕೋರ್ಟ್ ಪಂಚ್‌ಗಳೊಂದಿಗೆ ಗೆಲುವು ಸಾಧಿಸಿದರು. ಪಂದ್ಯವು 47 ನಿಮಿಷ ಗಳಲ್ಲಿಯೇ ಮುಕ್ತಾಯ ಗೊಂಡಿತು. ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ ಕಂಚು ವಿಜೇತ, ಉಡುಪಿಯ ಆಯುಷ್ ಅವರಿಗೆ ಕೆನಡಾದ ಯಂಗ್ ವಿರುದ್ಧ ಮೂರನೇ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಮಲೇಷ್ಯಾ ಓಪನ್ ಹಾಗೂ ತೈಪೆ ಓಪನ್ ಟೂರ್ನಿಯಲ್ಲಿಯೂ ಯಂಗ್ ವಿರುದ್ಧ ಗೆಲುವು ಸಾಧಿಸಿದ್ದರು.