ಇಂಗ್ಲೆಂಡ್ : ಐದು ಶತಕಗಳು ಸಿಡಿಸಿದ ಬಳಿಕವೂ ಟೆಸ್ಟ್ನಲ್ಲಿ ಸೋಲನ್ನು ಕಂಡ ಮೊದಲ ತಂಡವಾಗಿ ಭಾರತ ಕೆಟ್ಟ ದಾಖಲೆ ಬರೆದಿದೆ. ಈ ಹಿಂದೆ 1928ರಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ವೊಂದರಲ್ಲಿ 4 ಶತಕ ಸಿಡಿಸಿ ಸೋಲನ್ನು ಕಂಡಿತ್ತು. ಇದೀಗ ಭಾರತ ಈಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. 148 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐದು ಶತಕ ಸಿಡಿಸಿ ಸೋಲನ್ನು ಕಂಡ ತಂಡವಾಗಿ ಕೆಟ್ಟ ದಾಖಲೆ ಬರೆದಿದೆ. ಆ್ಯಂಡ್ರಸನ್ ತೆಂಡೂಲ್ಕರ್ ಟ್ರೋಫಿ ಭಾಗವಾಗಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್ಗಳಿಂದ ಸೋಲನ್ನು ಕಂಡಿದೆ.
ಹೊಸ ನಾಯಕ ಶುಭ್ಮನ್ ಗಿಲ್ ನೇತೃತ್ವದಲ್ಲಿ ಮೈದಾನಕ್ಕಿಳಿದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಸೋಲಿನೊಂದಿಗೆ ಬ್ಯಾಟಿಂಗ್ಗೆ ಆಗಮಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್, ಗಿಲ್ ಮತ್ತು ಪಂತ್ ಅವರ ಶತಕದ ಸಹಾಯದಿಂದ 471 ರನ್‌ಗಳನ್ನು ಗಳಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡ ಉತ್ತಮ ಪ್ರದರ್ಶನ ನೀಡಿ ಮೊದಲ ಇನ್ನಿಂಗ್ಸ್‌ನಲ್ಲಿ 465 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಕೇವಲ 6 ರನ್‌ಗಳ ಮುನ್ನಡೆಯನ್ನು ಪಡೆಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ರಾಹುಲ್ ಮತ್ತು ಪಂತ್ ಅವರ ಶತಕದ ಸಹಯಾದಿಂದ 364 ರನ್‌ಗಳನ್ನು ಕಲೆಹಾಕಿ ಇಂಗ್ಲೆಂಡ್‌ಗೆ ಗೆಲ್ಲಲು 371 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನು ಹತ್ತಿದ ಆಂಗ್ಲ ಪಡೆ ಬೆನ್ ಡಕೆಟ್ ಅವರ ಶತಕ, ಜ್ಯಾಕ್ ಕ್ರೌಲಿ ಮತ್ತು ಜೋ ರೂಟ್ ಅವರ ಅದ್ಭುತ ಅರ್ಧಶತಕಗಳಿಂದಾಗಿ 82 ಓವರ್‌ಗಳಲ್ಲಿ 373 ರನ್‌ಗಳನ್ನು ಗಳಿಸುವ ಮೂಲಕ 5 ವಿಕೆಟ್‌ಗಳ ಜಯ ಸಾಧಿಸಿತು. ಈ ಸೋಲಿನೊಂದಿಗೆ, ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಯಿಂದ ಹಿನ್ನಡೆ ಅನುಭವಿಸಿದೆ.