ನೆದರ್ಲೆಂಡ್ಸ್ : ಒಲಿಂಪಿಕ್ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಪುರುಷರ ಹಾಕಿ ತಂಡವು ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಇಂದು ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್ ಸಿಂಗ್ ಬಳಗವು ಯುರೋಪಿಯನ್ ಲೆಗ್‌ನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 1-2 ಮತ್ತು 2– 3ರಿಂದ ಆತಿಥೇಯ ತಂಡದ ವಿರುದ್ಧ ಎಡವಿತ್ತು. ತಂಡವು ಈ ಪಂದ್ಯಗಳಲ್ಲಿ ಎಸಗಿದ ತಪ್ಪನ್ನು ತಿದ್ದಿಕೊಂಡು ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಭಾರತಕ್ಕೆ ಬರೋಬ್ಬರಿ ಒಂಬತ್ತು ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿತ್ತು. ಕೇವಲ ಒಂದನ್ನು ಮಾತ್ರ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತ್ತು. ಪಂದ್ಯ ಮುಕ್ತಾಯಕ್ಕೆ ಮೂರು ನಿಮಿಷ ಇರುವಂತೆ ಡಚ್ ಆಟಗಾರರು ಭಾರತದ ರಕ್ಷಣಾವ್ಯೂಹವನ್ನು ಭೇದಿಸಿ ಗೆಲುವಿನ ಗೋಲು ದಾಖಲಿಸಿ ಸಂಭ್ರಮಿಸಿದ್ದರು. ಭಾರತ ತಂಡಕ್ಕೆ ಟೂರ್ನಿಯಲ್ಲಿ ಇನ್ನೂ ಆರು ಪಂದ್ಯಗಳು ಬಾಕಿ ಉಳಿದಿವೆ. ಈತನಕ 10 ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯುವ ದೃಷ್ಟಿಯಿಂದ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡ ಹರ್ಮನ್ ಬಳಗದ ಮೇಲಿದೆ. ಅರ್ಜೆಂಟೀನಾ ತಂಡವು 10 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.
'ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ನಾವು ಎದುರಿಸಬೇಕಾದ ಸವಾಲುಗಳ ಬಗ್ಗೆ ಅರಿವಿದೆ. ಎದುರಾಳಿ ತಂಡ ಬಲಿಷ್ಠವಾಗಿದ್ದು, ಉತ್ತಮ ಆಟದ ಪ್ರದರ್ಶನಕ್ಕೆ ಸಿದ್ಧರಾಗಿದ್ದೇವೆ' ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.