image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅರಿನಾ ಸಬಲೆಂಕಾರನ್ನು ಮಣಿಸಿ ಮೊದಲ ಬಾರಿ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೊಕೊ ಗಾಫ್

ಅರಿನಾ ಸಬಲೆಂಕಾರನ್ನು ಮಣಿಸಿ ಮೊದಲ ಬಾರಿ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಕೊಕೊ ಗಾಫ್

ಪ್ಯಾರಿಸ್: ಸೆಟ್ ಹಿನ್ನಡೆಯಿಂದ ಅಮೋಘ ರೀತಿ ಚೇತರಿಸಿಕೊಂಡ ಕೊಕೊ ಗಾಫ್ ಅವರು ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಶನಿವಾರ 6-7 (5), 6-2, 6-4 ರಿಂದ ಆಘಾತ ನೀಡಿ ಮೊದಲ ಬಾರಿ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಇದು ಅಮೆರಿಕದ ಆಟಗಾರ್ತಿಗೆ ಎರಡನೇ ಗ್ರಾನ್‌ಸ್ಲಾಮ್ ಪ್ರಶಸ್ತಿ. 2015ರಲ್ಲಿ ಸೆರೆನಾ ವಿಲಿಯಮ್ಸ್ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಪ್ರಶಸ್ತಿ ಗೆದ್ದ ನಂತರ, ಈ ಸಾಧನೆಗೆ ಪಾತ್ರರಾದ ಅಮೆರಿಕದ ಮೊದಲ ಆಟಗಾರ್ತಿ ಎಂಬ ಹಿರಿಮೆ 21 ವರ್ಷ ವಯಸ್ಸಿನ ಗಾಫ್ ಅವರದಾಯಿತು. 2002ರ (ಸೆರೆನಾ) ನಂತರ ಈ ಪ್ರಶಸ್ತಿ ಗೆದ್ದ ಅಮೆರಿಕದ ಅತಿ ಕಿರಿಯ ಆಟಗಾರ್ತಿ ಎನಿಸಿದರು ಕೂಡ.

ಅವರು ಟ್ರೋಫಿಯ ಜೊತೆಗೆ ಸುಮಾರು ₹25 ಕೋಟಿ ಬಹುಮಾನ ಪಡೆದರು. ಬೆಲರೂಸ್‌ನ ಆಟಗಾರ್ತಿ ಸುಮಾರು ₹12.50 ಕೋಟಿ ಬಹುಮಾನ ತಮ್ಮದಾಗಿಸಿಕೊಂಡರು. ಸತತ ಮೂರನೇ ಟ್ರ್ಯಾನ್‌ಸ್ಲಾಮ್‌ ಫೈನಲ್‌ ಆಡಿದ ಸಬಲೆಂಕಾ, ನೆಟ್ ಬಳಿ ಚುರುಕಿನ ಆಟ, ನಾಜೂಕಿನ ಡ್ರಾಪ್‌ಗಳ ಮೂಲಕ ಮೂರನೇ ಗೇಮ್‌ನಲ್ಲಿ ಎದುರಾಳಿಯ ಸರ್ವಿಸ್‌ಅನ್ನು ಒಂದೂ ಪಾಯಿಂಟ್ ಕೊಡದೇ ಬ್ರೇಕ್ ಮಾಡಿ 4-1 ರಲ್ಲಿ ಮುನ್ನಡೆ ಪಡೆದಿದ್ದರು.

ಆದರೆ ಚೇತರಿಸಿಕೊಂಡ ಗಾಫ್ ತಿರುಗೇಟು ನೀಡಿ ಎದುರಾಳಿ ಸರ್ವಅನ್ನು ಪಾಯಿಂಟ್ ಕೊಡದೇ ಮುರಿದರು. ಇದಕ್ಕೆ ಸರ್ವ್ ವೇಳೆ ಸಬಲೆಂಕಾ ಮಾಡಿದ ತಪ್ಪುಗಳೂ ಕಾರಣವಾದವು. ಎಂಟು ಗೇಮ್‌ಗಳ ನಂತರ ಸ್ಕೋರ್ 4-4 ಸಮನಾಯಿತು. ನಂತರ ಇಬ್ಬರಿಂದಲೂ ತಪ್ಪುಗಳು ಯಥೇಚ್ಛವಾದವು. ಗಾಫ್ ಸೆಟ್‌ಅನ್ನು ಟೈಬ್ರೇಕರಿಗೆ ಬೆಳೆಸಿದ್ದು 4-1 ಮುನ್ನಡೆ ಕೂಡ ಪಡೆದಿದ್ದರು. ಆದರೆ ಈ ಹಂತದಲ್ಲಿ ಸಬಲೆಂಕಾ ಚೇತರಿಸಿ ಮೊದಲ ಸೆಟ್ ಗೆದ್ದರು.

2023ರ ಅಮೆರಿಕ ಓಪನ್ ಚಾಂಪಿಯನ್ ಗಾಫ್ ಆಟದ ತೀವ್ರತೆ ಹೆಚ್ಚಿಸಿದರು. ಎರಡನೇ ಸೆಟ್‌ನ ಮೊದಲ ಐದು ಗೇಮ್‌ಗಳಲ್ಲಿ ನಾಲ್ಕನ್ನು ಗೆದ್ದರು. ಸಬಲೆಂಕಾ ಎಸಗಿದ ತಪ್ಪುಗಳಿಂದ ಸೆಟ್‌ಅನ್ನು ಸುಲಭವಾಗಿ ಪಡೆದರು. ಮೂರನೇ ಸೆಟ್‌ನ ಒಂದು ಹಂತದಲ್ಲಿ ಗಾಫ್ 3-1 ಮುನ್ನಡೆ ಪಡೆದಿದ್ದರು. ಈ ಹಂತದಲ್ಲಿ ಸಬಲೆಂಕಾ ಕೊಂಚ ಹೋರಾಟ ತೋರಿದರು. ಆದರೆ ಸಕಾಲದಲ್ಲಿ ಏಕಾಗ್ರತೆ ಕಂಡುಕೊಂಡ ಗಾಫ್ ಸೆಟ್ ಹಾಗೂ ಪಂದ್ಯ ಗೆದ್ದರು.

Category
ಕರಾವಳಿ ತರಂಗಿಣಿ