ಜಕಾರ್ತಾ: ಭಾರತದ ಅಗ್ರ ಪುರುಷರ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟ‌್ರಫೈನಲ್‌ಗೆ ಮುನ್ನಡೆದರು. ಆದರೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಅವರು ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರು. 2023ರಲ್ಲಿ ಈ ಟೂರ್ನಿಯ ಚಾಂಪಿಯನ್ನರಾಗಿದ್ದ ಸಾತ್ವಿಕ್-ಚಿರಾಗ್ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ರಾಸ್ಮಸ್ ಕ್ಕೇರ್- ಪ್ರೆಡರಿಕ್ ಸೊಗಾರ್ಡ್ ಜೋಡಿಯ ವಿರುದ್ಧ ಒತ್ತಡದ ಸನ್ನಿವೇಶದಲ್ಲೂ ಸಂಯಮದಿಂದ ಆಡಿದರು. 68 ನಿಮಿಷಗಳ ತೀವ್ರ ಹೋರಾಟದ ಪಂದ್ಯವನ್ನು 16-21, 21-18, 22-20ರಲ್ಲಿ ಗೆದ್ದರು. ಡೆನ್ಮಾರ್ಕ್‌ನ ಜೋಡಿ ವಿಶ್ವ ಕ್ರಮಾಂಕದಲ್ಲಿ 16ನೇ ಸ್ಥಾನ ಪಡೆದಿದೆ.
ಹೋದ ವಾರವಷ್ಟೇ ಸಿಂಗಪುರ ಓಪನ್ 750 ಟೂರ್ನಿಯ ಸೆಮಿಫೈನಲ್ಸ್ ತಲುಪಿದ್ದ ವಿಶ್ವದ ಮಾಜಿ ಅಗ್ರಮಾನ್ಯ ಜೋಡಿ ಕ್ವಾರ್ಟ‌್ರಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ಮಾನ್ ವೀ ಚೊಂಗ್- ಕೈ ವುನ್ ಟೀ ಜೋಡಿಯನ್ನು ಎದುರಿಸಲಿದೆ. ಇದಕ್ಕೆ ಮೊದಲು ಭಾರತದ ಪಿ.ವಿ.ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಎಂಟನೇ ಕ್ರಮಾಂಕದ ಆಟಗಾರ್ತಿ ಪೋರ್ನ್‌ಪವೀ ಚೊಚುವಾಂಗ್ ಅವರಿಗೆ ಮಣಿದರು. ಸಿಂಧು ನಿರ್ಣಾಯಕ ಗೇಮ್‌ನ ಒಂದು ಹಂತದಲ್ಲಿ 15-11ರಲ್ಲಿ ಮುನ್ನಡೆ ಪಡೆದಿದ್ದರೂ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಥಾಯ್ಲೆಂಡ್‌ನ ಆಟಗಾರ್ತಿ 78 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 20-22, 21-10, 21-18 ರಿಂದ ಜಯಗಳಿಸಿದರು.
ಭಾರತದ ಉಳಿದ ಸ್ಪರ್ಧಿಗಳಿಗೂ ನಿರಾಶೆ ಕಾದಿತ್ತು. ಮಿಶ್ರ ಡಬಲ್ಸ್ ಎರಡನೇ ಸುತ್ತಿನಲ್ಲಿ ಸತೀಶ್ ಕರುಣಾಕರನ್ ಮತ್ತು ಆದ್ಯಾ ವರಿಯತ್ ಜೋಡಿ ಕೇವಲ 25 ನಿಮಿಷಗಳಲ್ಲಿ 7-21, 12-21 ರಲ್ಲಿ ನೇರ ಗೇಮ್‌ಗಳಿಂದ ಆರನೇ ಶ್ರೇಯಾಂಕದ ದೇಚೊಪೊಲ್ ಪುವಾರನು- ಸುಪಿಸ್ಸರಾ ಪೇವಸಂಪ್ರನ್ ಜೋಡಿಗೆ (ಥಾಯ್ಲೆಂಡ್) ಜೋಡಿಗೆ ಮಣಿಯಿತು. ಮಹಿಳೆಯರ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಟ್ರಿಸಾ ಜೋಳಿ ಜೋಡಿ 13-21, 22-24ರಲ್ಲಿ ಜಪಾನಿನ ಯುಕಿ ಫುಕುಶಿಮಾ- ಮಯು ಮಾತ್ರುಮೋಟೊ ಜೋಡಿಗೆ ಶರಣಾಯಿತು. ಭಾರತದ ಜೋಡಿ, ಗಾಯಾಳಾಗಿ ಪುನರಾಗಮನ ಮಾಡಿದ ನಂತರ ಆಡುತ್ತಿರುವ ಎರಡನೇ ಟೂರ್ನಿ ಇದು.