ದಕ್ಷಿಣ ಕೊರಿಯಾ : ಭಾರತದ ಅಗ್ರ ಹರ್ಡಲ್ಸ್ ಓಟಗಾರ್ತಿ ಜ್ಯೋತಿ ಯಾಜಿ ಮತ್ತು ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆವೀರ ಅವಿನಾಶ್ ಸಾಬ್ಳೆ ಅವರು ಅತ್ಯಮೋಘ ಪ್ರದರ್ಶನ ನೀಡಿ, 26ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್‌ನ ಮೂರನೇ ದಿನವಾದ ಗುರುವಾರ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
ದಿನದ ಕೊನೆಗೆ ಮಹಿಳೆಯರ 4x400 ಮೀ. ರಿಲೇ ಓಟದಲ್ಲೂ ಬಂಗಾರದ ಪದಕ ಭಾರತದ ಪಾಲಾಯಿತು. ಭಾರತ ಒಂದೇ ದಿನ ಮೂರು ಚಿನ್ನ, ಎರಡು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದುಕೊಂಡು ಪ್ರಾಬಲ್ಯ ಮೆರೆಯಿತು. ಪದಕ ಪಟ್ಟಿಯಲ್ಲಿ ಐದು ಚಿನ್ನ ಸೇರಿ 14 ಪದಕಗಳೊಂದಿಗೆ ಭಾರತವು ಎರಡನೇ ಸ್ಥಾನ ದಲ್ಲಿದೆ. 12 ಚಿನ್ನ ಸೇರಿದಂತೆ 21 ಪದಕಗಳೊಂದಿಗೆ ಚೀನಾ ಅಗ್ರಸ್ಥಾನದಲ್ಲಿದೆ.
ಜ್ಯೋತಿ 100 ಮೀ. ಹರ್ಡಲ್ಸ್ ನಲ್ಲಿ ನೂತನ ಕೂಟ ದಾಖಲೆಯೊಡನೆ (12.96 ಸೆ) ಚಿನ್ನ ಗೆದ್ದರು. 13.04 ಸೆ.ಗಳ ಹಳೆಯ ದಾಖಲೆಯನ್ನು ಕಜಕಸ್ತಾನದ ಓಲ್ಲಾ ಶಿಶಿಗಿನಾ (1998ರಲ್ಲಿ) ಮತ್ತು ಸುನ್ ಯಾವಿಗಿ (2011ರಲ್ಲಿ) ಜಂಟಿಯಾಗಿ ಹೊಂದಿದ್ದರು. ಜ್ಯೋತಿ 2023ರ ಆವೃತ್ತಿಯಲ್ಲೂ 13.09 ಸೆ.ಗಳ ಅವಧಿಯೊಡನೆ ಚಿನ್ನ ಗೆದಿದ್ದರು.