ದಕ್ಷಿಣ ಕೊರಿಯಾ : ರಾಷ್ಟ್ರೀಯ ದಾಖಲೆ ಹೊಂದಿರುವ ಗುಲ್ವಿರ್ ಸಿಂಗ್ ಅವರು ಪುರುಷರ 10,000 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ದಿನವೇ ಚಿನ್ನ ಗೆದ್ದುಕೊಟ್ಟರು. ಪುರುಷರ 20 ಕಿ.ಮೀ. ರೇಸ್ ವಾಕ್ ಸ್ಪರ್ಧೆಯಲ್ಲಿ ಸೆರ್ವಿನ್ ಸೆಬಾಸ್ಟಿಯನ್ ಕಂಚಿನ ಪದಕ ಗೆದ್ದುಕೊಂಡರು. 2023ರ ಹಾಂಗ್‌ಝ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ 26 ವರ್ಷ ವಯಸ್ಸಿನ ಗುಲ್ಲೀರ್ ಇಲ್ಲಿ ಸ್ಪರ್ಧೆ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದು 28 ನಿಮಿಷ 38.63 ಸೆಕೆಂಡುಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿದರು. ಇದು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಮೊದಲ ಚಿನ್ನ.
ಜಪಾನ್‌ನ ಮೆಬುಕಿ ಸುಝುಕಿ (ಕಾಲ: 28:43.84) ಬೆಳ್ಳಿ ಪದಕ ಗೆದ್ದುಕೊಂಡರೆ, ಬಹರೇನ್‌ನ ಆಲ್ಬರ್ಟ್ ಕಿಬಿಚಿ ರೊಪ್ (ಕಾಲ: 28:467.82) ಕಂಚಿನ ಪದಕ ಗೆದ್ದುಕೊಂಡರು. ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಸಿರ್ಸಾ ಗ್ರಾಮದ ರೈತನ ಪುತ್ರನಾದ ಗುಲ್ವಿರ್, ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸುತ್ತ ಬಂದಿದ್ದಾರೆ. ಈ ವರ್ಷದ ಆರಂಭದಲ್ಲಿ 275.00.22 ಸೆ.ಗಳೊಡನೆ ಕೊನೆಯ ಬಾರಿ ದಾಖಲೆ ಸುಧಾರಿಸಿದ್ದರು.
ಈ ಋತುವಿನಲ್ಲಿ ಏಷ್ಯದ ಉತ್ತಮ ಅವಧಿ ದಾಖಲಿಸಿದ್ದ ಗುರ್ಲ್ವಿ ಇಲ್ಲಿ ಲೆಕ್ಕಾಚಾರದೊಡನೆ ಓಡಿದಂತೆ ಕಂಡಿತು. ರೇಸ್‌ನ ಬಹುಭಾಗ ಅವರು ಮುನ್ನಡೆಯಲ್ಲಿದ್ದರು. ಕೊನೆಯ ಹಂತದಲ್ಲಿ ಮೊದಲ ಮೂವರ ನಡುವೆ ತುರುಸಿನ ಪೈಪೋಟಿ ಕಂಡುಬಂತು. ಕೊನೆಯ ಲ್ಯಾಪ್‌ಗೆ ಸ್ವಲ್ಪ ಮೊದಲು ಕಿಬಿಚಿ ಚೂರು ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ ಲ್ಯಾಪ್ ಅರ್ಧದಷ್ಟು ಮುಗಿದಾಗ ಗುಲ್ವಿರ್ ಮತ್ತೆ ಅಗ್ರಸ್ಥಾನಕ್ಕೇರಿದರು. ಕೊನೆಯ 100 ಮೀ. ಓಟವನ್ನಂತೂ ಸ್ಪಿಂಟರ್ ರೀತಿ ಓಡಿದರು. ಗುಲ್ವಿರ್, ಈ ಓಟ ಗೆದ್ದ ಭಾರತದ ಮೂರನೇ ಓಟಗಾರ. ಈ ಕೂಟದಲ್ಲಿ ಈ ಹಿಂದೆ ಹರಿ ಚಾಂದ್ (1975) ಮತ್ತು ಜಿ.ಲಕ್ಷ್ಮಣನ್ ಚಿನ್ನ ಗೆದ್ದಿದ್ದರು.
5,000 ಮೀ. ಓಟದಲ್ಲೂ ರಾಷ್ಟ್ರೀಯ ದಾಖಲೆ ಹೊಂದಿರುವ ಅವರು ಇಲ್ಲಿ ಈ ಸ್ಪರ್ಧೆಯಲ್ಲೂ ಕಣಕ್ಕಿಳಿಯಲಿದ್ದಾರೆ. ಕಳೆದ ಸಲ ಅವರು ಕಂಚಿನ ಪದಕ ಗೆದ್ದಿದ್ದು, ಅದಕ್ಕಿಂತ ಮೇಲಿನ ಸ್ಥಾನ ಪಡೆಯುವ ಯತ್ನದಲ್ಲಿದ್ದಾರೆ.