image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಕ್ವಾಂಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶ

ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಕ್ವಾಂಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶ

ಪ್ಯಾರಿಸ್‌: ಹಾಲಿ ಚಾಂಪಿಯನ್ನರಾದ ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಕ್ವಾಂಟೆಕ್ ಸೋಮವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ನೇರ ಸೆಟ್‌ಗಳ ಗೆಲುವಿನೊಡನೆ ಎರಡನೇ ಸುತ್ತು ಪ್ರವೇಶಿಸಿದರು. ಸ್ಪೇನ್‌ನ ತಾರೆ ಅಲ್ಕರಾಜ್ 6-3, 6-4, 6-2ರಿಂದ ಇಟಲಿಯ ಕ್ವಾಲಿಫೈಯ‌ರ್ ಆಟಗಾರ ಗಿಯುಲಿಯೊ ಜೆಪ್ಪಿಯೇರಿ ಅವರನ್ನು ಹಿಮ್ಮೆಟ್ಟಿಸಿ, ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದರು. ಎರಡನೇ ಶ್ರೇಯಾಂಕದ ಅಲ್ಕರಾಜ್‌ ಮುಂದಿನ ಸುತ್ತಿನಲ್ಲಿ ಹಂಗೇರಿಯ ಫ್ಯಾಬಿಯನ್ ಮರೋಜ್ಜನ್ ಅವರನ್ನು ಎದುರಿಸುವರು.

ರೋಲ್ಯಾಂಡ್‌ ಗ್ಯಾರೋಸ್‌ನ ಸುಝಾನ್ ಲೆಂಗ್ಲೆನ್ ಕೋರ್ಟ್‌ನಲ್ಲಿ ನಡೆದ ಹಣಾಹಣಿಯಲ್ಲಿ ವಿಶ್ವದ 310ನೇ ಕ್ರಮಾಂಕದ ಆಟಗಾರನನ್ನು ಸೋಲಿಸಲು 22 ವರ್ಷ ವಯಸ್ಸಿನ ಅಲ್ಕರಾಜ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪ್ರಸಕ್ತ ಋತುವಿನ ಮಾಂಟೆ ಕಾರ್ಲೋ ಮಾಸ್ಟರ್ಸ್ ಮತ್ತು ಇಟಾಲಿಯನ್ ಓಪನ್ ಟ್ರೋಫಿಗಳನ್ನು ಆವೆ ಮಣ್ಣಿನ ಮೇಲೆ ಗೆದ್ದಿರುವ ಅಲ್ಕರಾಜ್‌ ಇಲ್ಲೂ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರನಾಗಿದ್ದಾರೆ. ಅವರು ಐದನೇ ಟ್ರ್ಯಾನ್‌ಸ್ಲಾಮ್ ಕಿರೀಟದ ನಿರೀಕ್ಷೆಯಲ್ಲಿದ್ದಾರೆ.

ಟೇಲರ್‌ಗೆ ಆಘಾತ: ಅಮೆರಿಕದ ಟೇಲರ್ ಪ್ರಿಟ್ಸ್ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಶ್ರೇಯಾಂಕ ರಹಿತ ಜರ್ಮನಿಯ ಡೇನಿಯಲ್ ಆಳ್ವೆಮೇಯರ್ 7-5, 3-6, 6-3, 6-1ರಿಂದ ನಾಲ್ಕನೇ ಶ್ರೇಯಾಂಕದ ಟೇಲ‌ರ್ ಅವರಿಗೆ ಆಘಾತ ನೀಡಿದರು. ನಾಲ್ಕು ಗ್ರಾನ್‌ಸ್ಲಾಮ್ ಕಿರೀಟಗಳ ಒಡತಿ ನವೋಮಿ ಒಸಾಕಾ ಮೊದಲ ಸುತ್ತಿನಲ್ಲೇ ಹೊರಬಿದ್ದರು. 10ನೇ ಶ್ರೇಯಾಂಕದ ಪೌಲಾ ಬಡೋಸಾ (ಸ್ಪೇನ್) 6-7 (1/7), 6-1, 6-4ರಿಂದ ಜಪಾನ್ ಆಟಗಾರ್ತಿಯನ್ನು ಸದೆಬಡಿದರು. ಒಂಬತ್ತನೇ ಶ್ರೇಯಾಂಕದ ಎಮ್ಮಾನವರೊ ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು. ಸ್ಪೇನ್‌ನ ಜೆಸ್ಸಿಕಾ ಬೆಜೋಸ್ ಮನೇರಿಯೊ 6-0, 6-1ರಿಂದ ನಿರಾಯಾಸವಾಗಿ ಅಮೆರಿಕದ ಆಟಗಾರ್ತಿಯನ್ನು ಮಣಿಸಿದರು.

Category
ಕರಾವಳಿ ತರಂಗಿಣಿ