ಬೆಂಗಳೂರು: ಕರ್ನಾಟಕದ ಎ.ದೀಪಕ್ ಮತ್ತು ಮಣಿಪುರದ ಜೆನ್ನಿಫರ್ ಲುಯಿಖಮ್ ಅವರು ಎಐಟಿಎ ಟಿಎನ್‌ಆರ್ ಸ್ಮರಣಾರ್ಥ ಆಲ್ ಇಂಡಿಯಾ ಬ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು. ಇಲ್ಲಿನ ಟಾಪ್‌ಸ್ಪಿನ್ ಟೆನಿಸ್ ಅಕಾಡೆಮಿ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ದೀಪಕ್ 6-4, 3-2ರಿಂದ ಆರನೇ ಶ್ರೇಯಾಂಕದ ರಿಷಿ ರೆಡ್ಡಿ ಅವರನ್ನು ಮಣಿಸಿದರು.
ಎರಡನೇ ಸೆಟ್ ಆಟದ ವೇಳೆ ಕರ್ನಾಟಕದ ಮತ್ತೊಬ್ಬ ರಿಷಿ ಗಾಯಾಳಾಗಿ ಪಂದ್ಯದಿಂದ ಹಿಂದೆ ಸರಿದರು. ದೀಪಕ್ ಪ್ರಶಸ್ತಿಯ ಜೊತೆ ₹12.5 ಸಾವಿರ ಬಹುಮಾನ ಮತ್ತು 20 ಎಐಟಿಎ ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. ರಿಷಿ ₹8.5 ಸಾವಿರ ಮತ್ತು 15 ಎಐಟಿಎ ಅಂಕ ಗಳಿಸಿದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಜೆನ್ನಿಫರ್ 1-6, 6-2, 6-4 ಕರ್ನಾಟಕದ ಹರ್ಷಿಣಿ ರೆಡ್ಡಿ ಅವರನ್ನು ಸೋಲಿಸಿದರು. ಅವರು ಪ್ರಶಸ್ತಿಯೊಂದಿಗೆ ₹12.5 ಸಾವಿರ ಬಹುಮಾನ ಮತ್ತು 20 ಎಐಟಿಎ ಪಾಯಿಂಟ್ಸ್ ಪಡೆದರು. ಟೂರ್ನಿಯು ಒಟ್ಟು ₹2 ಲಕ್ಷ ಬಹುಮಾನ ಮೊತ್ತ ಒಳಗೊಂಡಿತ್ತು.