ಅರುಣಾಚಲ ಪ್ರದೇಶ : ಆತಿಥೇಯ ಭಾರತ ತಂಡವು ಭಾನುವಾರ ನಡೆದ ಸ್ಯಾಫ್ 19 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ನಿಗದಿತ ಅವಧಿಯಲ್ಲಿ ಪಂದ್ಯವು 1-1 ಗೋಲುಗಳಿಂದ ಸಮಬಲಗೊಂಡಿತ್ತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ತಂಡವು 4-3ರಿಂದ ಗೆಲುವು ಸಾಧಿಸಿ, ಎರಡನೇ ಬಾರಿ ಚಾಂಪಿಯನ್ ಆಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ಗೋಲ್‌ಕೀಪರ್ ಸೂರಜ್ ಸಿಂಗ್ ಉತ್ತಮ ಪ್ರದರ್ಶನ ತೋರಿದರು. ಎದುರಾಳಿ ತಂಡದ ಎರಡು ಪ್ರಯತ್ನವನ್ನು ವಿಫಲಗೊಳಿಸಿ, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಬಿಬ್ಲಿಯಾನೊ ಫೆರ್ನಾಂಡಿಸ್ ಮಾರ್ಗದರ್ಶನದ ಭಾರತ ತಂಡವು ಪಂದ್ಯದ ಎರಡನೇ ನಿಮಿಷದಲ್ಲೇ ಮುನ್ನಡೆ ಸಾಧಿಸಿತು. ಸಿಂಗಮಯುಂ ಶಮಿ ಅವರು ಅಮೋಘ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿದರು. 61ನೇ ನಿಮಿಷದಲ್ಲಿ ಬಾಂಗ್ಲಾದೇಶದ ಜಾಯ್ ಅಹಮ್ಮದ್ ಚೆಂಡನ್ನು ಗುರಿ ಸೇರಿಸಿದರು. ಹೀಗಾಗಿ, ಉಭಯ ತಂಡಗಳ ಸ್ಕೋರ್ ಸಮಬಲಗೊಂಡಿತು. ನಂತರದಲ್ಲಿ ಎರಡೂ ತಂಡಗಳು ಮೇಲುಗೈ ಸಾಧಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.