ನವದೆಹಲಿ: ಭಾರತದ ಯುಕಿ ಭಾಂಬ್ರಿ ಮತ್ತು ಅವರ ಅಮೆರಿಕದ ಜೊತೆಗಾರ ರಾಬರ್ಟ್ ಗ್ಯಾಲವೆ ಫ್ರಾನ್ಸ್‌ನ ಬೋರ್ಡನಲ್ಲಿ ನಡೆಯುತ್ತಿರುವ ಬೋರ್ಡ್ ಚಾಲೆಂಜರ್ ಟೂರ್ನಿಯ ಡಬಲ್ಸ್ ಸೆಮಿಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಕ್ವಾರ್ಟ‌್ರಫೈನಲ್ ಪಂದ್ಯದಲ್ಲಿ, ಎರಡನೇ ಶ್ರೇಯಾಂಕದ ಇಂಡೊ-ಅಮೆರಿಕನ್ ಜೋಡಿ 7-5, 6-3 ರಿಂದ ಆತಿಥೇಯ ಫ್ರಾನ್ಸ್‌ನ ಹಾಲಿಸ್ ಆಲ್ಬನೊ ಒಲಿವೆಟ್ಟಿ ಜೋಡಿಯನ್ನು ಸೋಲಿಸಿತು. ಪಂದ್ಯ 68 ನಿಮಿಷಗಳ ಕಾಲ ನಡೆಯಿತು.
ಯುಕಿ ಮತ್ತು ಗ್ಯಾಲವೆ ಜೋಡಿ ಮುಂದಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಬ್ರೆಜಿಲ್‌ನ ರಫೇಲ್ ಮಾಟೊಸ್- ಮಾರ್ಸೆಲೊ ಮೆಲೊ ಜೋಡಿಯನ್ನು ಎದುರಿಸಲಿದೆ. ಭಾರತದ ಇತರ ಆಟಗಾರರು ನಿರ್ಗಮಿಸಿದರು. ಎನ್.ಶ್ರೀರಾಮ್ ಬಾಲಾಜಿ ಮತ್ತು ಮೆಕ್ಸಿಕೊದ ಜೊತೆಗಾರ ಮಿಗೆಲ್ ರೆಯಿಸ್-ವೆಲರೆ ಅವರು ಕ್ವಾರ್ಟ‌್ರಫೈನಲ್‌ನಲ್ಲಿ ಹೊರಬಿದ್ದರು. ಸುಮಿತ್ ನಗಾಲ್ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.