ದೋಹಾ: ಡೈಮಂಡ್ ಲೀಗ್ ಕೂಟದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿ ಅಭಿನಂದಿಸಿದ್ದಾರೆ.
ಡೈಮಂಡ್ ಲೀಗ್ ಕೂಟದಲ್ಲಿ ಜಾವೆಲಿನ್ ಅನ್ನು 90.23 ಮೀಟರ್ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ನಿರಂತರ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ಅವರ ಸಾಧನೆಗೆ ದೇಶ ಹೆಮ್ಮೆಪಡುತ್ತದೆ ಎಂದು ಮೋದಿ ಹೇಳಿದ್ದಾರೆ. ನೀರಜ್ ಚೋಪ್ರಾ ಅವರ ಸಾಧನೆಗೆ ನಾಡಿನ ಗಣ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇವರಲ್ಲಿ ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಿನಿಮಾ ತಾರೆಯರು, ಉದ್ಯಮಿಗಳು ಸೇರಿದಂತೆ ಅಭಿಮಾನಿಗಳು ಅಭಿನಂಧನೆಗಳನ್ನು ಹೇಳುತ್ತಿದ್ದಾರೆ. ದೋಹಾದಲ್ಲಿ ಶುಕ್ರವಾರ ರಾತ್ರಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಜಾವೆಲಿನ್ ಅನ್ನು 90.23 ಮೀಟರ್ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಪ್ರದರ್ಶಿಸಿದರು.
ದೋಹಾದ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಏರಿಳಿತ ಕಂಡ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ 91.06 ಮೀಟರ್ ಸಾಧನೆಯೊಂದಿಗೆ ಜರ್ಮನಿಯ ಜೂಲಿಯನ್ ವೆಬರ್ ಅಗ್ರಸ್ಥಾನ ಪಡೆದರು. ವೆಬರ್ ಅವರ ಕೊನೆಯ ಪ್ರಯತ್ನಕ್ಕೂ ಮುನ್ನ ಮುನ್ನಡೆ ಕಾಯ್ದುಕೊಂಡಿದ್ದ ನೀರಜ್ ಅಂತಿಮ ವಾಗಿ ಎರಡನೇ ಸ್ಥಾನ ಗಳಿಸಿದರು. 27 ವರ್ಷ ವಯಸ್ಸಿನ ನೀರಜ್ ಇದೇ ಮೊದಲ ಬಾರಿ 90 ಮೀಟರ್ ಮೈಲಿಗಲ್ಲು ದಾಟಿದರು. ಈ ಸಾಧನೆ ಮಾಡಿದ ವಿಶ್ವದ 25ನೇ ಮತ್ತು ಏಷ್ಯಾದ ಮೂರನೇ ಅಥೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಲಿಂಪಿಕ್ ಚಾಂಪಿಯನ್, ಪಾಕಿಸ್ತಾನದ ಅರ್ಷದ್ ನದೀಂ (92.97 ಮೀ), ಮತ್ತು ಚೀನಾ ತೈಪೆಯ ಚೆಂಗ್ ಚಾವೊ ಸುನ್ (91.36 ಮೀ) ಈ ಸಾಧನೆ ಮಾಡಿದ ಏಷ್ಯಾದ ಇನ್ನಿಬ್ಬರು. ಅರ್ಷದ್ ಇಲ್ಲಿ ಭಾಗವಹಿಸಿರಲಿಲ್ಲ.