image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸ್ಮೃತಿ ಮಂದಾನ ಶತಕ ಮತ್ತು ಬೌಲಿಂಗ್‌ನಲ್ಲಿ ರಾಣಾ ಪರಾಕ್ರಮದಿಂದ ಭಾರತದ ವನಿತೆಯರ ಮುಡಿಗೆ ತ್ರಿಕೋನ ಸರಣಿ

ಸ್ಮೃತಿ ಮಂದಾನ ಶತಕ ಮತ್ತು ಬೌಲಿಂಗ್‌ನಲ್ಲಿ ರಾಣಾ ಪರಾಕ್ರಮದಿಂದ ಭಾರತದ ವನಿತೆಯರ ಮುಡಿಗೆ ತ್ರಿಕೋನ ಸರಣಿ

ಕೊಲಂಬೊ: ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ಸಿಡಿಸಿದ ಅಮೋಘ ಶತಕ ಹಾಗೂ ಸ್ನೇಹ ರಾಣಾ, ಅಮನ್ಹೋತ್ ಕೌರ್ ಅವರ ಮಿಂಚಿನ ಬೌಲಿಂಗ್ ಬಲದಿಂದ ಭಾರತ ತಂಡವು ಮಹಿಳೆಯರ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯನ್ನು ಮುಡಿಗೇರಿಸಿಕೊಂಡಿದೆ. ಇಲ್ಲಿನ ಆ‌ರ್. ಪ್ರೇಮದಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 342 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಆತಿಥೇಯ ಲಂಕಾ ಪಡೆ, 48.2 ಓವರ್‌ಗಳಲ್ಲಿ 245 ರನ್ ಗಳಿಸಿ ಸರ್ವಪತನ ಕಂಡಿತು.

ಬೃಹತ್ ಗುರಿ ಬೆನ್ನತ್ತಿದ ಲಂಕಾ ಪಡೆಗೆ ಉತ್ತಮ ಆರಂಭಸಿಗಲಿಲ್ಲ. ತಂಡ ಖಾತೆ ತೆರೆಯುವ ಮೊದಲೇ ಹಾಸಿನಿ ಪೆರೆರಾ (0) ವಿಕೆಟ್ ಒಪ್ಪಿಸಿದರು. ನಂತರ ವಿಶ್ಮಿಗುಣರತ್ನ (36 ರನ್) ಹಾಗೂ ನಾಯಕಿ ಚಾಮರಿ ಅಟಪಟ್ಟು (51 ರನ್) ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿ, ಇನಿಂಗ್ಸ್‌ ಬಲ ತುಂಬಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನೀಲಾಕ್ಷಿಕಾ ಸಿಲ್ವಾ ಕೂಡ (48 ರನ್) ಉಪಯಕ್ತ ಆಟವಾಡಿದರು. ಈ ಮೂವರು ಔಟಾಗುತ್ತಿದ್ದಂತೆ, ಲಂಕನ್ನರು ಜಯದ ಆಸೆ ಕೈಬಿಟ್ಟರು.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಬ್ಯಾಟಿಂಗ್‌ ಆಯ್ದುಕೊಂಡರು. ಅದರಂತೆ, ಇನಿಂಗ್ಸ್ ಆರಂಭಿಸಿದ ಪ್ರತಿಕಾ ರಾವಲ್ (30 ರನ್) ಹಾಗೂ ಮಂದಾನ ಜೋಡಿ, ಮೊದಲ ವಿಕೆಟ್‌ಗೆ 70 ರನ್ ಕಲೆಹಾಕಿತು. ರಾವಲ್ ಔಟಾದ ನಂತರವೂ ಅಮೋಘ ಬ್ಯಾಟಿಂಗ್‌ ಮುಂದುವರಿಸಿದ ಮಂದಾನ, ಹರ್ಲಿನ್ ಡಿಯೋಲ್ ಜೊತೆಗೂಡಿ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 120 ರನ್ ಕೂಡಿಸಿದರು.

101 ಎಸೆತಗಳನ್ನು ಎದುರಿಸಿದ ಮಂದಾನ 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 116 ರನ್ ಬಾರಿಸಿದರು. ಇದು ಏಕದಿನ ಮಾದರಿಯಲ್ಲಿ ಅವರು ಬಾರಿಸಿದ 11ನೇ ಶತಕ. ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ (15 ಶತಕ) ಹಾಗೂ ನ್ಯೂಜಿಲೆಂಡ್‌ನ ಸೂಝಿ ಬೆಟ್ಸ್ (13 ಶತಕ) ಮಾತ್ರವೇ ಮಂದಾನಗಿಂತ ಮುಂದಿದ್ದಾರೆ.

ಹರ್ಲಿನ್ ಅವರೂ (56 ಎಸೆತ, 46 ರನ್ ಗಳಿಸಿ) ಮಂದಾನ ಹಿಂದೆಯೇ ಪೆವಿಲಿಯನ್ ಸೇರಿಕೊಂಡರು. ನಂತರ ನಾಯಕಿ ಹರ್ಮನ್ ಹಾಗೂ ಜೆಮಿಮಾ ರಾಡ್ರಿಗಸ್ ಬೀಸಾಟ ರಂಗೇರಿತು. ಟಿ20 ಶೈಲಿಯಲ್ಲಿ ಬ್ಯಾಟ್‌ ಮಾಡಿದ ಈ ಇಬ್ಬರೂ ತಂಡದ ಮೊತ್ತವನ್ನು 350ರ ಸನಿಹಕ್ಕೆ ಕೊಂಡೊಯಯ್ದರು.

30 ಎಸೆತಗಳನ್ನು ಆಡಿದ ಕೌರ್ 41 ರನ್ ಗಳಿಸಿದರೆ, ಜೆಮಿಮಾ 29 ಎಸೆತಗಳಲ್ಲಿ 44 ರನ್ ಬಾರಿಸಿದರು. ಸ್ಫೋಟಕ ಶೈಲಿಯ ಬ್ಯಾಟರ್ ರಿಚಾ ಘೋಷ್ (8 ರನ್) ವಿಫಲರಾದರೂ, ಕೆಳಕ್ರಮಾಂಕದಲ್ಲಿ ಅಮನ್‌ಜೋತ್ ಕೌರ್ (18 ರನ್) ಹಾಗೂ ದೀಪ್ತಿ ಶರ್ಮಾ (20 ರನ್) ಉಪಯುಕ್ತ ಕೊಡುಗೆ ನೀಡಿದರು. ಲಂಕಾ ಪರ ಮಲ್ಕಿ ಮದರ, ದೆ ವಿಹಂಗ ಮತ್ತು ಸುಗಂಧಿಕಾ ಕುಮಾರಿ ತಲಾ ಎರಡು ವಿಕೆಟ್ ಪಡೆದರೆ, ಇನೋಕಾ ರಣವೀರ ಒಂದು ವಿಕೆಟ್ ಕಿತ್ತರು.

Category
ಕರಾವಳಿ ತರಂಗಿಣಿ