ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಉಲ್ಬಣಿಸಿರುವ ಕಾರಣ, ಐಪಿಎಲ್ ಕ್ರಿಕೆಟ್ ಟೂರ್ನಿಯ ಉಳಿದ ಪಂದ್ಯಗಳನ್ನು ಮುಂದೂಡಲಾಗಿದೆ. ದೇಶದ 13 ನಗರಗಳಲ್ಲಿ ಐಪಿಎಲ್ ಟೂರ್ನಿಯು ನಡೆಯುತ್ತಿತ್ತು. ಮಾರ್ಚ್ 22ರಂದು ಆರಂಭವಾಗಿತ್ತು, ಮೇ 25ಕ್ಕೆ ಫೈನಲ್ ನಿಗದಿಯಾಗಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಳಿದ ಪಂದ್ಯಗಳ ಮೇಲೆ ಪ್ರಭಾವ ಬೀರಿದೆ. ಟೂರ್ನಿಯು ಅಂತಿಮ ಹಂತಕ್ಕೆ ತಲುಪಿದ್ದು, ಲೀಗ್ ಹಂತದಲ್ಲಿ 12, ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್ ಪಂದ್ಯಗಳಷ್ಟೇ ಬಾಕಿ ಇವೆ. ಆದಾಗ್ಯೂ ಟೂರ್ನಿಯನ್ನು ಒಂದು ವಾರದ ಬಳಿಕ ನಡೆಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೇ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ. ಗುಜರಾತ್ ಟೈಟನ್ಸ್ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಂಕಗಳನ್ನು ಪಡೆದಿರುವ ಆರ್‌ಸಿಬಿ ಎರಡನೇ ಸ್ಥಾನ, ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದೆ. 14 ಪಾಯಿಂಟ್ಸ್ ಪಡೆದಿರುವ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ.
ಈ ತಂಡಗಳಿಗೆ ನಿಕಟ ಪೈಪೋಟಿ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (14), ಕೋಲ್ಕತ್ತಾ (11), ಲಖನೌ (10) ತಂಡಗಳು ಕ್ರಮವಾಗಿ ಐದು, ಆರು, ಏಳನೇ ಸ್ಥಾನದಲ್ಲಿವೆ. ಉಳಿದಂತೆ ಚೆನ್ನೈ, ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.