ಕೊಲಂಬೊ: ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಅವರ ಜೀವನಶ್ರೇಷ್ಠ ಶತಕ, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಅವರ ಅರ್ಧ ಶತಕಗಳ ನೆರವಿನಿಂದ ಭಾರತ ತಂಡ, ಮಹಿಳಾ ತ್ರಿಕೋನ ಸರಣಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 23 ರನ್‌ಗಳಿಂದ ಸೋಲಿಸಿತು. ಮೂರನೇ ಗೆಲುವಿನೊಡನೆ ಭಾರತ ಈ ಟೂರ್ನಿಯ ಫೈನಲ್ ತಲುಪಿತು.
ರಾಡ್ರಿಗಸ್ 101 ಎಸೆತಗಳಲ್ಲಿ 123 ರನ್ ಬಾರಿಸಿದ್ದು, ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಮತ್ತು 15 ಬೌಂಡರಿಗಳಿದ್ದವು. ಭಾರತ 50 ಓವರುಗಳಲ್ಲಿ 9 ವಿಕೆಟ್‌ಗೆ 337 ರನ್‌ಗಳ ಉತ್ತಮ ಮೊತ್ತ ಗಳಿಸಿತು. ದಕ್ಷಿಣ ಆಫ್ರಿಕಾ ತಂಡ ಹೋರಾಟ ತೋರಿದರೂ ಭಾರತದ ಮಧ್ಯಮ ವೇಗಿ ಅಮನ್‌ಜೋತ್ ಕೌರ್ (59ಕ್ಕೆ3) ಮತ್ತು ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ (57ಕ್ಕೆ2) ಅವರು ಕಡಿವಾಣ ತೊಡಿಸಿದ್ದರಿಂದ 7 ವಿಕೆಟ್‌ಗೆ 314 ರನ್ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದಲ್ಲಿ ಅನ್ನೇರಿ ಡೆರ್ಕ್‌ಸನ್ ಅವರ ಆಕರ್ಷಕ 81 ರನ್ (80ಎ, 4x5, 6x2)ಮತ್ತು ಕೆಳಕ್ರಮಾಂಕದಲ್ಲಿ ಹಂಗಾಮಿ ನಾಯಕಿ ಕ್ಲೋ ಟ್ರಿಯಾನ್ (67, 43ಎ, 4x4, 6x5) ಅವರು ಅರ್ಧ ಶತಕಗಳನ್ನು ಬಾರಿಸಿದರೂ ಫಲ ನೀಡಲಿಲ್ಲ.
ನಾಲ್ಕು ಪಂದ್ಯಗಳನ್ನು ಆಡಿದ ಭಾರತ ಆರು ಪಾಯಿಂಟ್‌ಗಳೊಡನೆ ರೌಂಡ್‌ರಾಬಿನ್ ಲೀಗ್ ವ್ಯವಹಾರ ಪೂರೈಸಿತು. ಆತಿಥೇಯ ಲಂಕಾ ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಗಳಿಸಿದೆ. ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯ ಆಡಲಿದೆ. ಮೂರು ಪಂದ್ಯ ಆಡಿರುವ ದಕ್ಷಿಣ ಆಫ್ರಿಕಾ ಇನ್ನೂ ಪಾಯಿಂಟ್ ಖಾತೆ ತೆರೆದಿಲ್ಲ. ಭಾರತ ಮತ್ತೊಮ್ಮೆ ಉಜ್ವಲ ಬ್ಯಾಟಿಂಗ್ ಪ್ರದರ್ಶನ ನೀಡಿ 300ಕ್ಕಿಂತ ಹೆಚ್ಚು ಮೊತ್ತ ಪೇರಿಸಿತು. 24 ವರ್ಷದ ಜೆಮಿಮಾ ಅವರಿಗೆ ಇದು ಏಕದಿನ ಪಂದ್ಯಗಳಲ್ಲಿ ಎರಡನೇ ಶತಕ.
ಅವರು ಎರಡು ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿಯಾದರು. ಆರಂಭ ಆಟಗಾರ್ತಿ ಸ್ಮೃತಿ ಮಂದಾನ (51, 63ಎ) ಜೊತೆ ಮೊದಲ ವಿಕೆಟ್‌ಗೆ 99 ಎಸೆತಗಳಲ್ಲಿ 88 ರನ್ ಸೇರಿಸಿದರು. ನಂತರ ಐದನೇ ವಿಕೆಟ್‌ಗೆ ದೀಪ್ತಿ ಶರ್ಮಾ ಜೊತೆ 115 ಎಸೆತಗಳಲ್ಲಿ 122 ರನ್ ಪೇರಿಸಿದರು. ಏಳು ರನ್‌ಗಳಿಂದ ಶತಕ ತಪ್ಪಿಸಿಕೊಂಡ ದೀಪ್ತಿ 84 ಎಸೆತಗಳನ್ನು ಆಡಿ 10 ಬೌಂಡರಿ, ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ದಕ್ಷಿಣ ಆಫ್ರಿಕಾ 48 ಓವರುಗಳಲ್ಲಿ 6 ವಿಕೆಟ್‌ಗೆ 299 ರನ್ ಗಳಿಸಿದ್ದಾಗ ಮಂದ ಬೆಳಕಿನಿಂದ ಕೆಲಕಾಲ ಪಂದ್ಯಕ್ಕೆ ಅಡ್ಡಿಯಾಯಿತು.