ಕೊಲಂಬೊ: ಭಾರತ ತಂಡ, ಬುಧವಾರ ನಡೆಯಲಿರುವ ಮಹಿಳಾ ತ್ರಿಕೋನ ಸರಣಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾನುವಾರ ಆತಿಥೇಯ ಲಂಕಾ ಕೈಲಿ ಅನುಭವಿಸಿದ ಸೋಲಿನಿಂದ ಪುಟಿದೆದ್ದು, ಫೈನಲ್ ತಲುಪುವ ಕಡೆ ಭಾರತ ಚಿತ್ತನೆಟ್ಟಿದೆ. ಹರ್ಮನ್ ಪ್ರೀತ್ ಕೌರ್ ಪಡೆಯ ಸತತ ಎಂಟು ಪಂದ್ಯಗಳ ಗೆಲುವಿನ ಸರಪಣಿ ಭಾನುವಾರ ಕಡಿದುಹೋಗಿತ್ತು. ಲಂಕಾ ತಂಡ ಏಳು ವರ್ಷಗಳಲ್ಲಿ ಮೊದಲ ಬಾರಿ ಭಾರತ ತಂಡವನ್ನು ಸೋಲಿಸಿತ್ತು.
ನಿವ್ವಳ ರನ್ ದರದ ಆಧಾರದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಭಾರತ ಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ, ಬುಧವಾರದ ಪಂದ್ಯವನ್ನೂ ಗೆದ್ದು ಅರ್ಹವಾದ ರೀತಿ ಫೈನಲ್ ತಲುಪಲು ಯತ್ನ ನಡೆಸಲಿದೆ. ಅಂಕಪಟ್ಟಿಯಲ್ಲಿ ಲಂಕಾ ಎರಡನೇ ಮತ್ತು ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿವೆ. ಆಫ್ರಿಕಾ ಒಂದು ಪಂದ್ಯ ಕಡಿಮೆ ಆಡಿದೆ.
ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮವಾಗಿದೆ. ಆರಂಭಆಟಗಾರ್ತಿ ಪ್ರತಿಕಾ ರಾವಲ್ ಎರಡು ಅರ್ಧ ಶತಕಗಳ ಸಹಿತ 163 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಸ್ನೇಹ ರಾಣಾ 4.25ರ ಇಕಾನಮಿಯಲ್ಲಿ 11 ವಿಕೆಟ್ ಗಳಿಸಿ ಪರಿಣಾಮಕಾರಿ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ನದಿನ್ ಡಿ ಕ್ಲರ್ಕ್ ಮಾತ್ರ ಅವರಿಗಿಂತ ಕಡಿಮೆ ಇಕಾನಮಿ ಹೊಂದಿದ್ದಾರೆ.
ಮೂರನೇ ಪಂದ್ಯದಲ್ಲಿ ಭಾರತದ ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿರಲ್ಲಿಲ್ಲ. ವೇಗದ ಬೌಲಿಂಗ್ ಆಲ್‌ರೌಂಡರ್ ಕಶ್ವಿ ಗೌತಮ್ ಐದು ಓವರುಗಳ ನಂತರ ಕುಂಟುತ್ತ ಹೊರನಡೆದಿದ್ದು ಚಿಂತೆ ಕಾರಣವಾಗಿದೆ. ಇನ್ನೊಂದು ಕಡೆ ದಕ್ಷಿಣ ಆಫ್ರಿಕಾ ತಂಡವು ಪರದಾಡುತ್ತಿದೆ. ಈ ಸರಣಿಯ ಎರಡು ಪಂದ್ಯ ಸೇರಿದಂತೆ ಈ ತಂಡವು ಆಡಿದ ಕೊನೆಯ ಒಂಬತ್ತು ಏಕದಿನ ಪಂದ್ಯಗಳಲ್ಲಿ ಎಂಟನ್ನು ಸೋತಿದೆ.
ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡವು ವಿಫಲವಾಗಿದೆ. ಸಾಲದ್ದಕ್ಕೆ ಶ್ರೀಲಂಕಾದ ಸೆಕೆಯು ತಂಡದ ಆಟಗಾರ್ತಿಯರನ್ನು ಹೈರಾಣು ಮಾಡಿದೆ. ಭಾರತ ವಿರುದ್ಧ ಪಂದ್ಯದಲ್ಲಿ ಪ್ರಮುಖ ಬ್ಯಾಟರ್ ತಾಲ್ಮೀನ್ ಬ್ರಿಟ್ಸ್ ಸ್ನಾಯು ನೋವಿಗೆ ಒಳಗಾಗಿದ್ದರು. ಅವರು ಹೊರನಡೆದ ನಂತರ ಭಾರತ ಮೇಲುಗೈ ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕರಬೊ ಮೆಸೊ ಸಹ ಬಿಸಿಲಿನ ಝಳಕ್ಕೆ ಒಳಗಾಗಿ ಮೈದಾನದಿಂದ ನಿರ್ಗಮಿಸಿದ್ದರು.