ರಾಮನಗರ: ಮಲೇಷ್ಯಾದ ಪ್ಯಾನಸೋನಿಕ್ ರಾಷ್ಟ್ರೀಯ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ನಡೆದ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಮನಗರದ ಶಾನ್ವಿ ಸತೀಶ್ 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ನಾಲ್ಕು ದಿನಗಳ ಕಾಲ ನಡೆದ ಸ್ಪರ್ಧೆಯಲ್ಲಿ 7ರಿಂದ 8 ವಯೋಮಾನದ 23 ಮತ್ತು 27 ಕೆ.ಜಿ ತೂಕದ ವಿಭಾಗದಲ್ಲಿ ಶಾನ್ವಿ ಭಾರತ ಪ್ರನಿನಿಧಿಸಿದ್ದರು. ಸ್ಪಾರಿಂಗ್ ವಿಭಾಗದಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಕಂಚು ಪದಕ ಗೆದ್ದಿದ್ದಾರೆ.
ಕರ್ನಾಟಕದಲ್ಲಿ ನಾಳೆ ಮೊಳಗಲಿದೆ ಸೈರನ್ ....
ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮಯನ್ಮಾರ್, ಸಿರಿಯಾ ಹಾಗೂ ಮಲೇಷ್ಯಾ ದೇಶಗಳ 1,500ಕ್ಕೂ ಹೆಚ್ಚು ಕ್ರಿಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾರತ ತಂಡದಲ್ಲಿ 65 ಕ್ರೀಡಾಪಟುಗಳು ಭಾಗವಹಿಸಿದ್ದು, ಶಾನ್ವಿ ಸತೀಶ್ ಕೂಡ ಒಬ್ಬರಾಗಿದ್ದರು. ಶಾನ್ವಿ ಸತೀಶ್ ಈ ಹಿಂದೆ ದುಬೈ ಮತ್ತು ಉಜ್ಬೇಕಿಸ್ತಾನ್ ಮತ್ತು ಏಶಿಯನ್ ಚಾಂಪಿಯನ್ ಶಿಪ್ನಲ್ಲೂ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿದ್ದರು.
ಸ್ಪಾರಿಂಗ್ ವಿಭಾಗದಲ್ಲಿ ಆರಂಭದಿಂದಲೂ ಮುಂದಿದ್ದ ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಮಲೇಷ್ಯಾ ಸ್ಪರ್ಧಾಳು ಉತ್ತಮ ಪೈಪೋಟಿ ನೀಡಿದರು. ಅಂತಿಮವಾಗಿ, ಶಾನ್ವಿ ಚಿನ್ನಕ್ಕೆ ಮುತ್ತಿಟ್ಟರು. ಶಾನ್ವಿ ಸತೀಶ್ ರಾಮನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಹಾಗೂ ಚೈತ್ರಾ ದಂಪತಿಯ ಮಗಳು. ಭಾರತ ತಂಡದ ತರಬೇತುದಾರರಾದ ಪ್ರದೀಪ್ ಮತ್ತು ಬಾಲರಾಜನ್ ಅವರು ತರಬೇತಿ ನೀಡಿದ್ದರು.