ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಗುರುವಾರ ಭಾರತ ಮಹಿಳಾ ಹಾಕಿ ತಂಡವು ಅತ್ಯುತ್ತಮ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದೆ.
ಸಲೀಮಾ ಟೇಟೆ ಬಳಗವು ರಕ್ಷಣಾ ವ್ಯೂಹದಲ್ಲಿನ ದೌರ್ಬಲ್ಯಗಳನ್ನು ಸರಿಪಡಿಸಲು ಪ್ರಯತ್ನಿಸಲಿದೆ. ಜೂನ್‌ನಲ್ಲಿ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯ ಪಂದ್ಯಗಳಿಗೆ ಮುಖ್ಯ ಕೋಚ್ ಹರೇಂದ್ರ ಸಿಂಗ್ ಅವರು ಪ್ರಬಲ ತಂಡವನ್ನು ಗುರುತಿಸುವತ್ತ ಕಣ್ಣಿಟ್ಟಿದ್ದಾರೆ.
ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ ಪ್ರವಾಸಿ ತಂಡವು ಈ ಸರಣಿಯ ಮೂಲಕ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ಭಾರತ ತಂಡವು ಕ್ರಮವಾಗಿ 3-5ರಿಂದ ಮತ್ತು 2-3ರಿಂದ ಸೋತಿತ್ತು.
“ಅಭ್ಯಾಸ ಪಂದ್ಯಗಳಲ್ಲಿ ತಂಡದ ಹೆಚ್ಚಿನ ಆಟಗಾರರಿಗೆ ಆಡಲು ಅವಕಾಶ ಸಿಕ್ಕಿತ್ತು. ಈಗ ಉತ್ತಮ ಸಂಯೋಜನೆಯ ತಂಡವನ್ನು ಸ್ಪರ್ಧೆಗೆ ಇಳಿಸಲು ಪ್ರಯತ್ನಿಸುತ್ತೇವೆ' ಎಂದು ಹರೇಂದ್ರ ಸಿಂಗ್ ತಿಳಿಸಿದ್ದಾರೆ.