image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಹ್ಲಿ ತವರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ RCB

ಕೊಹ್ಲಿ ತವರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ RCB

ನವದೆಹಲಿ: ಮಿಂಚಿನ ಅರ್ಧಶತಕ ಗಳಿಸಿದ ಕೃಣಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಯದ ಕಾಣಿಕೆ ನೀಡಿದರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಿತು. ಇದರೊಂದಿಗೆ ಈ ಸಲದ ಟೂರ್ನಿಯಲ್ಲಿ ಆರ್‌ಸಿಬಿಯು ತವರಿನಾಚೆಯ ಪಂದ್ಯಗಳಲ್ಲಿ ಅಜೇಯ ಓಟವನ್ನು ಮುಂದುವರಿಸಿತು. ಈಚೆಗೆ ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯಿಸಿತ್ತು. ಅದರ ಮುಖ್ಯಿ ತೀರಿಸಿಕೊಳ್ಳುವಲ್ಲಿಯೂ ರಜತ್ ಪಾಟೀದಾ‌ರ್ ಬಳಗ ಇಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲ; ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

163 ರನ್‌ಗಳ ಗೆಲುವಿನ ಗುರಿಯನ್ನು ಸುಲಭವಾಗಿ ಸಾಧಿಸುವ ವಿಶ್ವಾಸದಲ್ಲಿ ಆರ್‌ಸಿಬಿ ಇತ್ತು. ಅದಕ್ಕೆ ತಕ್ಕಂತ ಯುವಪ್ರತಿಭೆ ಜೇಕಬ್ ಬೆಥೆಲ್ (12 ರನ್) ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡುವ ವಿಶ್ವಾಸ ಮೂಡಿಸಿದರು. ಆದರೆ ಇನಿಂಗ್ಸ್‌ನ 3ನೇ ಓವರ್ ಬೌಲಿಂಗ್ ಮಾಡಿದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಸತತ ಎರಡು ಎಸೆತಗಳಲ್ಲಿ ಜೇಕಬ್ ಮತ್ತು ದೇವದತ್ತ ಪಡಿಕ್ಕಲ್ ವಿಕೆಟ್‌ಗಳನ್ನು ಕಬಳಿಸಿದರು. ಜೇಕಬ್ ಅವರು ದೊಡ್ಡ ಹೊಡೆತ ಆಡುವ ಭರದಲ್ಲಿ ಕರುಣ್‌ ನಾಯರ್‌ಗೆ ಕ್ಯಾಚ್‌ ಆದರೆ, ಪಡಿಕ್ಕಲ್ ಕ್ಲೀನ್‌ಬೌಲ್ಡ್ ಆದರು.

ಕ್ರೀಸ್‌ಗೆ ಬಂದ ರಜತ್ ಪಾಟೀದಾರ್ (6 ರನ್) ಅವರು ಫೀಲ್ಡ‌ರ್ ಕರುಣ್ ಅವರು ಮಾಡಿದ ನಿಖರ ಪ್ರೋಗೆ ರನ್‌ಔಟ್‌ ಆದರು. ಆಗ ತಂಡದ ಸ್ಕೋರ್ 26 ರನ್‌ಗಳಿಗೆ 3 ವಿಕೆಟ್‌ಗಳು. ಈ ಹಂತದಲ್ಲಿ ಕೊಹ್ಲಿ ಕೂಡ ತಮ್ಮ ಆಟದ ವೇಗವನ್ನು ತಗ್ಗಿಸಿದರು. ಆದರೆ ವೇಗಿ ಮಿಚೆಲ್ ಸ್ಟಾರ್ಕ್ ಅವರ ಎಸೆತಗಳಲ್ಲಿ ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಪರಾಕ್ರಮ ಮೆರೆದರು.

ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಕೃಣಾಲ್ ಇನಿಂಗ್ಸ್ ದಿಕ್ಕು ಬದಲಿಸಿದರು. ಕೃಣಾಲ್ ಬೀಡುಬೀಸಾಗಿ ಬ್ಯಾಟ್‌ ಝಳಪಿಸಿದರು. ಅವರು ವಿರಾಟ್ ಗಿಂತ ಮುನ್ನವೇ ಅರ್ಧಶತಕದ ಗಡಿ ದಾಟಿದರು. 47 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಅಲ್ಲದೇ ವಿರಾಟ್ ಅವರೊಂದಿಗೆ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 119 ರನ್ ಸೇರಿಸಿದರು.

ವಿರಾಟ್ 45 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು. ಟೂರ್ನಿಯಲ್ಲಿ ಇದು ಅವರ ಆರನೇ ಅರ್ಧಶತಕ. ಅಲ್ಲದೇ 'ಆರೆಂಜ್ ಕ್ಯಾಪ್' ಕೂಡ ಪಡೆದರು. ಗೆಲುವಿಗೆ 17 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಚಾಮೀರಾ ಎಸೆತದಲ್ಲಿ ವಿರಾಟ್ ಅವರು ಸ್ಟಾರ್ಕ್‌ಗೆ ಕ್ಯಾಚ್ ಆದರು. ಟಿಮ್ ಡೇವಿಡ್ ಅವರು ಕೃಣಾಲ್‌ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Category
ಕರಾವಳಿ ತರಂಗಿಣಿ