ಬೆಂಗಳೂರು: ಮೇ 24ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 'ಎನ್‌ಸಿ ಕ್ಲಾಸಿಕ್' ಜಾವೆಲಿನ್ ಸ್ಪರ್ಧೆಗೆ ಪಾಕಿಸ್ತಾನದ ಅರ್ಷದ್ ನದೀಂಗೆ ಆಹ್ವಾನಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೀರಜ್ ಚೋಪ್ರಾ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿದೆ.
ಪಾಕ್ ಪ್ರೇರಿತ ಉಗ್ರರರಿಂದ ಜಮ್ಮು & ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯ ಕೋಟ್ಯಾಂತರ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿರುವಾಗ ಅರ್ಷದ್ ನದೀಂಗೆ ಅವಕಾಶ ನೀಡಬಾರದು ಎಂಬ ಕೂಗು ವ್ಯಕ್ತವಾಗುತ್ತಿದೆ.
ಉಗ್ರ ಕೃತ್ಯಕ್ಕೂ ಮುನ್ನವೇ ಆಹ್ವಾನ ನೀಡಲಾಗಿರುವುದನ್ನ ಅರ್ಥೈಸಿಕೊಳ್ಳದೆ ತಾವು ಮತ್ತು ತಮ್ಮ ಕುಟುಂಬವನ್ನ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಕಾರುತ್ತಿರುವುದರ ಕುರಿತು ಭಾರತದ ಜಾವೆಲೀನ್ ತಾರೆ ಹಾಗೂ ಸ್ಪರ್ಧೆಯ ಆಯೋಜಕ ನೀರಜ್ ಚೋಪ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
"ನಾನು ಸಾಮಾನ್ಯವಾಗಿ ಕಡಿಮೆ ಮಾತನಾಡುವ ವ್ಯಕ್ತಿ, ಆದರೆ ನನ್ನನ್ನ ತಪ್ಪು ಎಂದು ಭಾವಿಸುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಅರ್ಥವಲ್ಲ. ವಿಶೇಷವಾಗಿ ನಮ್ಮ ದೇಶದ ಮೇಲಿನ ನನ್ನ ಪ್ರೀತಿ ಮತ್ತು ನನ್ನ ಕುಟುಂಬದ ಗೌರವ ಮತ್ತು ಗೌರವವನ್ನು ಪ್ರಶ್ನಿಸುವ ವಿಷಯಕ್ಕೆ ಬಂದಾಗ ಮಾತನಾಡುತ್ತೇನೆ.
ನೀರಜ್ ಚೋಪ್ರಾ ಕ್ಲಾಸಿಕ್‌ನಲ್ಲಿ ಸ್ಪರ್ಧಿಸಲು ಅರ್ಷದ್ ನದೀಂ ಅವರನ್ನು ಆಹ್ವಾನಿಸುವ ನನ್ನ ನಿರ್ಧಾರದ ಬಗ್ಗೆ ತುಂಬಾ ಚರ್ಚೆ ನಡೆದಿದೆ ಮತ್ತು ಅದರಲ್ಲಿ ಹೆಚ್ಚಿನವು ದ್ವೇಷ ಮತ್ತು ನಿಂದನೆಯಿಂದ ಕೂಡಿದೆ. ಅವುಗಳಲ್ಲಿ ನನ್ನ ಕುಟುಂಬವನ್ನೂ ಹೊರಗಿಟ್ಟಿಲ್ಲ. ನಾನು ಅರ್ಷದ್‌ಗೆ ನೀಡಿದ ಆಹ್ವಾನವು ಒಬ್ಬ ಕ್ರೀಡಾಪಟುವಿನಿಂದ ಇನ್ನೊಬ್ಬ ಕ್ರೀಡಾಪಟುವಿಗೆ ನೀಡಿದ ಆಹ್ವಾನವೇ ಹೊರತು ಹೆಚ್ಚೇನೂ ಇಲ್ಲ, ಕಡಿಮೆಯೂ ಅಲ್ಲ.
ಭಾರತಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕರೆತರುವುದು ಮತ್ತು ನಮ್ಮ ದೇಶವು ವಿಶ್ವ ದರ್ಜೆಯ ಕ್ರೀಡಾಕೂಟಗಳ ತವರೂರಾಗುವುದು NC ಕ್ಲಾಸಿಕ್‌ನ ಗುರಿಯಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಎರಡು ದಿನಗಳ ಮೊದಲು ಸೋಮವಾರ ಎಲ್ಲಾ ಕ್ರೀಡಾಪಟುಗಳಿಗೆ ಆಹ್ವಾನಗಳು ಹೋಗಿದ್ದವು. ಕಳೆದ 48 ಗಂಟೆಗಳಲ್ಲಿ ನಡೆದ ಎಲ್ಲ ವಿದ್ಯಮಾನಗಳ ನಂತರ, NC ಕ್ಲಾಸಿಕ್‌ನಲ್ಲಿ ಅರ್ಷದ್ ಅವರ ಉಪಸ್ಥಿತಿಯು ಸಂಪೂರ್ಣವಾಗಿ ಪ್ರಶ್ನೆಯಿಂದ ಹೊರಗಿತ್ತು.
ನನ್ನ ದೇಶ ಮತ್ತು ಅದರ ಹಿತಾಸಕ್ತಿಗಳು ಯಾವಾಗಲೂ ಮೊದಲು ಬರುತ್ತವೆ. ತಮ್ಮ ಜನರ ನಷ್ಟವನ್ನು ಅನುಭವಿಸುತ್ತಿರುವವರೊಂದಿಗೆ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಇರುತ್ತವೆ. ನಡೆದ ಘಟನೆಯಿಂದ ಇಡೀ ರಾಷ್ಟ್ರದ ಜೊತೆಗೆ, ನನಗೂ ನೋವಾಗಿದೆ ಮತ್ತು ಕೋಪವೂ ಇದೆ.
ನಮ್ಮ ದೇಶದ ಪ್ರತಿಕ್ರಿಯೆಯು ಒಂದು ರಾಷ್ಟ್ರವಾಗಿ ನಮ್ಮ ಶಕ್ತಿಯನ್ನು ತೋರಿಸುತ್ತದೆ ಮತ್ತು ನ್ಯಾಯವನ್ನು ಒದಗಿಸಲಿದೆ ಎಂದು ನನಗೆ ವಿಶ್ವಾಸವಿದೆ. ನಾನು ಹಲವು ವರ್ಷಗಳಿಂದ ನನ್ನ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿದ್ದೇನೆ. ಆದ್ದರಿಂದ ನನ್ನ ಸಮಗ್ರತೆಯನ್ನು ಪ್ರಶ್ನಿಸಲಾಗುತ್ತಿರುವುದನ್ನ ನೋಡುತ್ತಿರುವುದು ನೋವುಂಟುಮಾಡುತ್ತದೆ. ಯಾವುದೇ ಒಳ್ಳೆಯ ಕಾರಣವಿಲ್ಲದೆ ನಾನು ಮತ್ತು ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿರುವ ಜನರಿಗೆ ನಾನು ನನ್ನನ್ನು ವಿವರಿಸಬೇಕಾಗಿರುವುದು ನನಗೆ ನೋವುಂಟುಮಾಡುತ್ತಿದೆ.
ನಾವು ಸರಳ ಜನರು, ದಯವಿಟ್ಟು ನಮ್ಮನ್ನು ಬೇರೆಯವರಂತೆ ಬಿಂಬಿಸಬೇಡಿ. ಕೆಲವರು ನನ್ನ ಸುತ್ತಲೂ ಸೃಷ್ಟಿಸಿರುವ ಹಲವಾರು ಸುಳ್ಳು ನಿರೂಪಣೆಗಳಿವೆ, ಆದರೆ ನಾನು ಮಾತನಾಡದ ಕಾರಣಕ್ಕೆ, ಅದು ನಿಜವಾಗುವುದಿಲ್ಲ. ಜನರು ಅಭಿಪ್ರಾಯಗಳನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟಕರವಾಗಿದೆ. ನನ್ನ ತಾಯಿ ತಮ್ಮ ಸರಳತೆಯಲ್ಲಿ - ಒಂದು ವರ್ಷದ ಹಿಂದೆ ಒಂದು ಮುಗ್ಧ ಕಾಮೆಂಟ್ ಮಾಡಿದಾಗ, ಅವರ ಅಭಿಪ್ರಾಯಗಳಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತು. ಇಂದು, ಅದೇ ಜನರು ಅದೇ ಹೇಳಿಕೆಗಾಗಿ ಅವರನ್ನು ಗುರಿಯಾಗಿಸಿಕೊಳ್ಳುವುದರಿಂದ ಹಿಂದೆ ಸರಿದಿಲ್ಲ.
ವರ್ಲ್ಡ್ ಅಥ್ಲೆಟಿಕ್ಸ್ 'ಎ' ವಿಭಾಗ ಅಥವಾ ಕಾಂಟಿನೆಂಟಲ್ ಟೂರ್ ಗೋಲ್ಡ್-ಲೆವೆಲ್ ಈವೆಂಟ್ ಎಂದು ವರ್ಗೀಕರಿಸಲಾಗಿರುವ ಎನ್‌ಸಿ ಕ್ಲಾಸಿಕ್ - 2025 ಭಾರತದಲ್ಲಿ ಈ ವಿಧದ ಮೊದಲ ಜಾವೆಲಿನ್ ಸ್ಪರ್ಧೆಯಾಗಿರಲಿದೆ. ಮೇ 24ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಸ್ಪರ್ಧೆಯನ್ನ ನಿಗದಿಸಲಾಗಿದೆ. ಈ ನಡುವೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಾಗಿ ತಯಾರಿ ನಡೆಸುತ್ತಿರುವುದರಿಂದ ತಮಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದಿರುವ ಅರ್ಷದ್ ನದೀಂ, ತಮ್ಮನ್ನು ಈ ಸ್ಪರ್ಧೆಗೆ ಆಹ್ವಾನಿಸಿರುವುದಕ್ಕೆ ನೀರಜ್ ಚೋಪ್ರಾ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.